ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ : 40 ಸಾವಿರ ರೂ. ನಗದು, 3 ಚಾಕು ವಶ
ಬೆಂಗಳೂರು : ಅಕ್ರಮ, ಅನೈತಿಕ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 40 ಸಾವಿರ ನಗದು, ಮೂರು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜೈಲಿನಲ್ಲಿರುವ ರೌಡಿಶೀಟರ್ಸ್ ಮತ್ತು ಅಪರಾಧಿಗಳು ಜೈಲಿನಿಂದಲೇ ಚುನಾವಣಾ ಅಕ್ರಮಕ್ಕೆ ಕುಮ್ಮಕು ನೀಡುತ್ತಿದ್ದಾರೆ ಎಂಬುದರ ಜೊತೆಗೆ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ಮೇಲೆ ನಿಗಾ ಇಡಲು, ಡ್ರಗ್ಸ್ ಸರಬರಾಜು ಮತ್ತು ಬಳಕೆ, ಮೊಬೈಲ್‍ಗಳ ಬಳಕೆ ಸೇರಿದಂತೆ ಇತರೆ ಕುಟೀಲ ಕಾರ್ಯಗಳಲ್ಲಿ ತೊಡಗಿರುವರ ಮೇಲೆ ನಿಗಾವಹಿಸಲು ಈ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜೈಲುಗಳು ಅಪರಾಧ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜೈಲುಗಳು ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದು ಬೇರೆ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತವೆ ಎಂದು ಬಿ.ದಯಾನಂದ್ ತಿಳಿಸಿದರು.
ರಾಮೇಶ್ವರಂ ಕೆಫೆ ಸೋಟಕ್ಕೂ ಜೈಲಿನಿಂದಲೇ ಸಂಚು ರೂಪಿಸಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ದಯಾನಂದ್, ಈ ಕುರಿತು ಎನ್‍ಐಎ ತನಿಖೆ ನಡೆಸುತ್ತಿದ್ದು, ನಾವು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಮನಃಪರಿವರ್ತನೆ, ಆರೋಗ್ಯ ಸಮಸ್ಯೆ, ವಯಸ್ಸು ಅಥವಾ ರೌಡಿ ಚಟುವಟಿಕೆಗಳಿಂದ ನಿಷ್ಕ್ರಿಯರಾದವರನ್ನು ಹೈಕೋರ್ಟ್‍ನ ಮಾರ್ಗಸೂಚಿಯ ಆಧಾರದ ಮೇಲೆ ರೌಡಿ ಪಟ್ಟಿಯಿಂದ ಅವರ ಹೆಸರುಗಳನ್ನು ತೆರವು ಮಾಡಲಾಗುತ್ತದೆ. ಅದೇ ರೀತಿ ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ರೌಡಿ ಪಟ್ಟಿ ತೆರೆಯಲಾಗುವುದು. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಬಿ.ದಯಾನಂದ್ ತಿಳಿಸಿದರು.