ವಿಧಾನ ಪರಿಷತ್ತಿನ ಎಲ್ಲ ಸ್ಥಾನಗಳನ್ನು ಗೆಲ್ಲಲು ಪ್ರಯತ್ನ : ಆರ್.ಅಶೋಕ್
ಬೆಂಗಳೂರು : ವಿಧಾನಪರಿಷತ್‍ನ ಶಿಕ್ಷಕರು ಹಾಗೂ ಪದವೀಧರರ ಎಲ್ಲ 6 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಮಾಡಬೇಕಾದ ಪ್ರಯತ್ನದ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಮಂಗಳವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಮುಖರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೂತ್‍ನಲ್ಲಿ ಮತದಾರರನ್ನು ಹುಡುಕಿ ಅವರಿಗೆ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಲು ವಿನಂತಿಸಬೇಕು. ವಿಧಾನಸಭಾ ಮಟ್ಟದಲ್ಲಿ ಸಭೆ ನಡೆಸಬೇಕೆಂದು ನಿರ್ಧರಿಸಲಾಗಿದೆ. ಪಕ್ಷದ ಪ್ರಮುಖರು, ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆ ಸಂಬಂಧ ಯಾರು ಅಭ್ಯರ್ಥಿಗಳು ಎಂದು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಗೊಂದಲ ಇಲ್ಲ ಎಂದು ಅವರು ನುಡಿದರು.
ದೂರವಾಣಿ ಕದ್ದಾಲಿಕೆ ಅಕ್ರಮ: 40-50 ಲಕ್ಷ ರೂ. ಕೊಟ್ಟರೆ ಚೀನಾದಿಂದ ದೂರವಾಣಿ ಕದ್ದಾಲಿಕೆ(ಪೋನ್ ಟ್ಯಾಪಿಂಗ್) ಮಾಡುವ ಯಂತ್ರ ಅಕ್ರಮವಾಗಿ ಸಿಗುತ್ತದೆ. ಪೋನ್ ಟ್ಯಾಪಿಂಗ್ ಎಂಬುದು ಅಕ್ರಮ. ಚೀನಾದಿಂದ ಖರೀದಿಸಿದ ಪೋನ್ ಟ್ಯಾಪಿಂಗ್ ಯಂತ್ರಗಳು ಕರ್ನಾಟಕಕ್ಕೆ ಎಷ್ಟು ಬಂದಿವೆ? ಯಾರ್ಯಾರ ಮನೆಯಲ್ಲಿ ಇದೆ? ಎಂಬುದನ್ನು ಪತ್ತೆ ಮಾಡಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅಶೋಕ್ ಉತ್ತರಿಸಿದರು.
ವಿರೋಧ ಪಕ್ಷದವರ ಫೋನ್ ಟ್ಯಾಪಿಂಗ್ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ನನಗೂ ಹೇಳಿದ್ದಾರೆ. ಸರಕಾರ ಫೋನ್ ಟ್ಯಾಪಿಂಗ್ ಮಾಡುತ್ತಿಲ್ಲ ಎಂದಾದರೆ ಇಂಥ ಯಂತ್ರಗಳು ಎಲ್ಲೆಲ್ಲಿ ಇವೆ ಎಂದು ತನಿಖೆ ಮಾಡಲಿ. ಅಂಥ ಯಂತ್ರಗಳನ್ನು ವಶಕ್ಕೆ ಪಡೆಯಲಿ. ಆಗ ಯಾರು ಮಾಡಿದ್ದಾರೆ, ಯಾರು ಮಾಡಿಸಿದ್ದಾರೆ ಎಂಬ ಅಂಶ ಬಯಲಿಗೆ ಬರಲಿದೆ ಎಂದು ಅವರು ಹೇಳಿದರು.
ಸರಕಾರ ಇಂಥ ಅಕ್ರಮ ಮಾಡಿಲ್ಲ ಎಂದು ಧೈರ್ಯದಿಂದ ಹೇಳುವುದಾದರೆ ಸಿಬಿಐ ತನಿಖೆ ಮಾಡಿಸಲಿ. ಫೋನ್ ಟ್ಯಾಪಿಂಗ್ ಯಂತ್ರಗಳನ್ನು ಬೇರೆ ದೇಶದಿಂದ ಖರೀದಿಸಿರುವ ಸಾಧ್ಯತೆ ಇದ್ದು, ಇಲ್ಲಿನ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ನುಡಿದರು.