ಮೆಟ್ರೋ ಕಾಮಗಾರಿ ವೇಳೆ ಅವಘಡದಿಂದ ಆಟೋ ಚಾಲಕ ಮೃತಪಟ್ಟ ಪ್ರಕರಣ: ಮೂವರ ವಿರುದ್ಧ ಎಫ್‍ಐಆರ್

ಬೆಂಗಳೂರು : ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಬೃಹತ್ ತಡೆಗೋಡೆ ಉರುಳಿ ಆಟೋ ಚಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಇಲ್ಲಿನ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ
ಮೃತ ಖಾಸೀಂ ಸಾಬ್ ಅವರ ಸಂಬಂಧಿ ಸೈಯ್ಯದ್ ಖಾದರ್ ನೀಡಿರುವ ದೂರಿನನ್ವಯ ವಯಾಡಕ್ಟ್ (ಬೃಹತ್ ತಡೆಗೋಡೆ) ಸಾಗಿಸುತ್ತಿದ್ದ ಲಾರಿ ಚಾಲಕ, ಕಾಮಗಾರಿ ವಹಿಸಿಕೊಂಡಿದ್ದ ಕಂಪೆನಿಯ ಮ್ಯಾನೇಜರ್ ಹಾಗೂ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕ್ರಮ ಜರುಗಿಸಲಾಗುವುದು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ: ಏರ್ಪೊರ್ಟ್ ಮಾರ್ಗದ ಮೆಟ್ರೋ ಕಾಮಗಾರಿಗೆ ಬಳಸಲು ಲಾರಿಯಲ್ಲಿ ವಯಾಡಕ್ಟ್ (ಬೃಹತ್ ತಡೆಗೋಡೆ) ಎ.15ರ ಮಂಗಳವಾರ ತಡರಾತ್ರಿ ಸಾಗಿಸಲಾಗುತ್ತಿತ್ತು. ಈ ವೇಳೆ, ಲಾರಿ ತಿರುವು ಪಡೆಯುವಾಗ ವಯಾಡೆಕ್ಟ್ ಉರುಳಿ ಆಟೋ ಮೇಲೆ ಬಿದ್ದಿದೆ. ಪರಿಣಾಮ ಆಟೋದಲ್ಲಿದ್ದ ಚಾಲಕ ಖಾಸೀಂ ಸಾಬ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ, ಅವಘಡ ಅರಿತ ಆಟೋದಲ್ಲಿದ್ದ ಪ್ರಯಾಣಿಕರು ತಕ್ಷಣವೇ ಆಟೋದಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.