ನಗರ ವ್ಯಾಪ್ತಿಯಲ್ಲಿ ಇ-ಖಾತಾ ಇಲ್ಲದ ಎಲ್ಲ ಆಸ್ತಿಗಳಿಗೂ ಬಿ-ಖಾತಾ : ಸಚಿವ ಕೃಷ್ಣ ಬೈರೇಗೌಡ

ಕೃಷ್ಣ ಬೈರೇಗೌಡ
ಬೆಂಗಳೂರು : ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿವೆ. ಈ ಪೈಕಿ 22 ಲಕ್ಷ ನಿವೇಶನ ಮಾಲಕರು ಇ- ಖಾತಾ ಮಾಡಿಸಿದ್ದಾರೆ. ಆದರೆ, 30 ರಿಂದ 32 ಲಕ್ಷ ನಿವೇಶನ ಆಸ್ತಿಗಳಿಗೆ ಯಾವುದೇ ರೀತಿಯಾದ ಇ-ದಾಖಲೆ ಇರುವುದಿಲ್ಲ. ಈ ಎಲ್ಲರಿಗೂ ಒನ್ಟೈಮ್ ಮಾದರಿಯಲ್ಲಿ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಜ.7ರಂದು ಸಭೆ ನಡೆಸಿ ಫೆ.10 ರಿಂದ ದಾಖಲೆ ಇಲ್ಲದ ನಿವೇಶನಗಳ ಮಾಲಕರಿಗೆ ಒಮ್ಮೆ ಇ-ಆಸ್ತಿ ನಮೂದಿಸಿ ಬಿ-ಖಾತಾ ಸಮಾನಾಂತರ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಫೆ.10ರೊಳಗೆ ಸುತ್ತೋಲೆ ಹೊರಡಿಸಿ ಗರಿಷ್ಠ ಮೂರು ತಿಂಗಳ ಒಳಗೆ ಅಭಿಯಾನ ಮಾದರಿಯಲ್ಲಿ ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ ಬಿ-ಖಾತಾ ಮಾಡಿಕೊಡಬೇಕು ಎಂದರು.
ಅನಧಿಕೃತ ನಿವೇಶನಗಳ ಬಗ್ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಇದೀಗ ನಾವು ಅದನ್ನು ಪಾಲಿಸಲೇಕಾದ ತುರ್ತು ಎದುರಾಗಿದೆ. ಹೀಗಾಗಿ ಎಷ್ಟು ನಿವೇಶನ ಇವೆ ಎಂದು ಗುರುತಿಸಿ ಸರಕಾರವೇ ಬಿ-ಖಾತಾ ಮಾಡಿಕೊಡಲಿದೆ. ಇದಾದ ಮೇಲೆ ರಾಜ್ಯದಲ್ಲಿ ಬಿ-ಖಾತಾ ಇರುವುದಿಲ್ಲ. ಎ-ಖಾತಾ ಮಾತ್ರ ಇರಲಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತ ನಿವೇಶನಗಳಿಗೆ ಅವಕಾಶವೇ ಇಲ್ಲ. ನಗರ ವ್ಯಾಪ್ತಿಯಲ್ಲಿ ಈ ಅಭಿಯಾನ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಮಾದರಿಯನ್ನು ಆರಂಭಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕಂದಾಯ ಆಯುಕ್ತ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ತಹಶೀಲ್ದಾರ್-ಎಸಿ ಕೋರ್ಟ್ ಪ್ರಕರಣಗಳ ಮುಗಿಸಲು 6 ತಿಂಗಳ ಗಡುವು :
ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಇರುವ ಎಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ಆರು ತಿಂಗಳ ಗಡುವು ನೀಡಲಾಗಿದೆ. ತಕರಾರು ಪ್ರಕರಣಗಳನ್ನು ತಹಶೀಲ್ದಾರ್ ನ್ಯಾಯಾಲಯಗಳು 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಎಂಬ ನಿಯಮವಿದೆ. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವಧಿ ಮೀರಿದ 10,774 ಪ್ರಕರಣಗಳಿದ್ದವು. ಪ್ರಸ್ತುತ ಈ ಸಂಖ್ಯೆಯನ್ನು 369ಕ್ಕೆ ಇಳಿಸಲಾಗಿದೆ. ಈ ಹಿಂದೆ ಪ್ರತಿ ಪ್ರಕರಣಗಳ ಇತ್ಯರ್ಥಕ್ಕೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಸರಾಸರಿ 7 ತಿಂಗಳಿಗಿಂತ ಹೆಚ್ಚು ಸಮಯ ವ್ಯಯವಾಗುತ್ತಿತ್ತು. ಆದರೆ, ಪ್ರಸ್ತುತ 67 ದಿನಕ್ಕೆ ಪ್ರಕರಣಗಳನ್ನು ವಿಲೇ ಮಾಡಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 62,857 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಸಂಖ್ಯೆಯನ್ನು 26,726ಕ್ಕೆ ಇಳಿಸಲಾಗಿದೆ. ಹಿಂದಿನ ಒಂದೂವರೆ ವರ್ಷದಲ್ಲಿ 36,131 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನಾವು ಅಧಿಕಾರ ಸ್ವೀಕರಿಸುವಾಗ ಐದು ವರ್ಷಕ್ಕೆ ಮೇಲ್ಪಟ್ಟ 32777 ಪ್ರಕರಣಗಳಿದ್ದವು, ಈ ಸಂಖ್ಯೆಯನ್ನು 6,602ಕ್ಕೆ ಇಳಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಉಳಿದ ಪ್ರಕರಣಗಳನ್ನೂ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ಇದರಿಂದ ಜನರು ಅನಗತ್ಯವಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಮಾಲಕತ್ವದ ಗ್ಯಾರಂಟಿಗೆ ದರ್ಖಾಸ್ತು ಪೋಡಿ ಅಭಿಯಾನ :
ದಶಕಗಳ ಹಿಂದೆ ಜಮೀನು ಮಂಜೂರು ಆಗಿದ್ದರೂ ಸಹ ಸರಿಯಾದ ದಾಖಲೆ ಇಲ್ಲದವರಿಗೆ ಜಮೀನಿನ ಮಾಲಕತ್ವದ ಗ್ಯಾರಂಟಿ ನೀಡುವ ಸಲುವಾಗಿ ದರ್ಖಾಸ್ತು ಪೋಡಿ ಕಾರ್ಯಕ್ರಮವನ್ನು ಅಭಿಯಾನ ಮಾದರಿಯಲ್ಲಿ ಜಾರಿಗೊಳಿಸಲಾಗಿದೆ. ಡಿಸೆಂಬರ್ ಮೊದಲ ವಾರದಿಂದಲೇ ದರ್ಖಾಸ್ತು ಪೋಡಿ ಅಭಿಯಾನ ಶುರುವಾಗಿದ್ದು, 26 ಸಾವಿರ ಮಂಜೂರಿದಾರರ ಜಮೀನುಗಳನ್ನು ಸರ್ವೇಗೆ ಅಂಕಿತ ಹಾಕಲಾಗಿದೆ. ಈ ಪೈಕಿ 5 ಸಾವಿರ ಜನರಿಗೆ ಈಗಾಗಲೇ ಸರ್ವೇ ಮುಗಿಸಿದ್ದೇವೆ. ಈ ಎಲ್ಲರಿಗೂ ಹೊಸ ಆರ್ಟಿಸಿ, ಪಹಣಿ ಹಾಗೂ ನಕ್ಷೆ ನೀಡಲಾಗುವುದು. ಇದು ಜಮೀನಿನ ಮಾಲೀಕತ್ವದ ಗ್ಯಾರಂಟಿಯಾಗಿದ್ದು, ಈ ಅಭಿಯಾನಕ್ಕೆ “ನನ್ನ ಭೂಮಿ” ಎಂದು ಹೆಸರಿಡಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೋತ್ಸಾಹ ಧನ
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಆಧಾರ್ ಸೀಡಿಂಗ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 2.12 ಕೋಟಿ ಜಮೀನುಗಳನ್ನು ಆರ್ಟಿಸಿ ಜೊತೆಗೆ ಆಧಾರ್ ಜೋಡಿಸಲಾಗಿದೆ. ಇದನ್ನೆಲ್ಲಾ ಮಾಡಿದ್ದು ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರು. ಇವರು ಫೀಲ್ಡ್ಗೆ ಹೋಗಿ ಈ ಕೆಲಸ ಮಾಡದಿದ್ದರೆ ಆಧಾರ್ ಸೀಡಿಂಗ್ ಸಾಧ್ಯವೇ ಇರುತ್ತಿರಲಿಲ್ಲ. ಹಲವರು ತಮ್ಮ ಕೈಯಿಂದ ಖರ್ಚು ಮಾಡಿ ಆಧಾರ್ ಸೀಡಿಂಗ್ ಮಾಡಿದ್ದಾರೆ. ಹೀಗಾಗಿ ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೋತ್ಸಾಹ ಧನ ನೀಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.