ಪಾದಯಾತ್ರೆಯಲ್ಲಿ 224 ಕ್ಷೇತ್ರಗಳಿಂದಲೂ ಕಾರ್ಯಕರ್ತರು ಭಾಗಿ : ಬಿ.ವೈ.ವಿಜಯೇಂದ್ರ
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ನಡೆದಿರುವ ಹಗರಣವನ್ನು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಆ.3ರಂದು ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸೋಮವಾರ ನಗರದ ಅರಮನೆ ಮೈದಾನದ ವೈಟ್‍ಪೆಟಲ್ಸ್ ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವ ತಯಾರಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರದ ಹಗರಣಗಳ ವಿರುದ್ಧ ನಡೆಸುವ ಪಾದಯಾತ್ರೆಯ ರೂಪುರೇಷೆಗಳ ಕುರಿತು ಪ್ರಮುಖರ ಸಭೆ ನಡೆಸಿ, ಚರ್ಚೆ ನಡೆಸಲಾಗಿದೆ. ಆ.3ರಂದು ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭಿಸಲಾಗುವುದು. ಅದಕ್ಕೂ ಮುನ್ನ ಕೆಂಗೇರಿ ಕೆಂಪಮ್ಮ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ವಿಜಯೇಂದ್ರ ಹೇಳಿದರು.
ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರತಿ ನಿತ್ಯ ಕನಿಷ್ಠ 20 ಕಿ.ಮೀ. ಪಾದಯಾತ್ರೆ ನಡೆಸಲಿದ್ದೇವೆ. ಆ.10ರಂದು ಮೈಸೂರಿನಲ್ಲಿ ಪಾದಯಾತ್ರೆ ಮುಕ್ತಾಯವಾಗಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರು ಭಾಗವಹಿಸುತ್ತಾರೆ. ಪಾದಯಾತ್ರೆಯ ಮೊದಲ ದಿನ ಯಶವಂತಪುರ, ದಾಸರಹಳ್ಳಿ, ಆರ್.ಆರ್.ನಗರ, ವಿಜಯನಗರ, ಶಿವಾಜಿನಗರ, ದೊಡ್ಡಬಳ್ಳಾಪುರ, ಮಾಗಡಿ, ಪದ್ಮನಾಭನಗರ, ರಾಜಾಜಿನಗರ, ಕೋಲಾರ ಹಾಗೂ ಕಲಬುರಗಿ ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಬರಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಪಾದಯಾತ್ರೆಯ ಯಶಸ್ಸಿಗೆ ತಂಡಗಳನ್ನು ರಚಿಸಲಾಗಿದೆ. ಮೊದಲ ದಿನ ಶಾಸಕ ಮುನಿರಾಜು ನೇತೃತ್ವ ವಹಿಸುತ್ತಾರೆ. ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಜೊತೆಗಿರುತ್ತಾರೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಕನಿಷ್ಠ 200 ಜನರು ಬರಲಿದ್ದಾರೆ. ವಸತಿ ವ್ಯವಸ್ಥೆ ಸೇರಿ ಎಲ್ಲವನ್ನೂ ಯೋಜಿಸಲಾಗಿದೆ. ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚಿಸುತ್ತೇವೆ ಎಂದು ಅವರು ತಿಳಿಸಿದರು.