ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ ಸರಕಾರ : ಬಿ.ವೈ.ವಿಜಯೇಂದ್ರ

ಬೆಂಗಳೂರು : ಅಭಿವೃದ್ಧಿಯ ವೇಗವನ್ನು ಚುರುಕು ಮತ್ತು ಹಣಕಾಸಿನ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಹಸಿಸುಳ್ಳನ್ನು ಈ ಕಾಂಗ್ರೆಸ್ ಸರಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಸೋಮವಾರ ವಿಧಾನಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ವಿಷಯದಲ್ಲಿ ಈ ಸರಕಾರದ ನಟ್ ಮತ್ತು ಬೋಲ್ಟ್ ಲೂಸ್ ಆಗಿದೆ. ಇದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನುಡಿದರು.
ಒಂದು ಕಡೆ ಹೈನುಗಾರಿಕೆಗೆ ಪ್ರೋತ್ಸಾಹಧನದ ಪ್ರಸ್ತಾಪ ಮಾಡಿದ್ದಾರೆ. ಸಾವಿರಾರು ಕೋಟಿ ರೂ. ಹಳೆಯ ಪ್ರೋತ್ಸಾಹ ಧನ ಹಾಗೇ ಬಾಕಿ ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು 90 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಎಷ್ಟು ಮೀಸಲಿಟ್ಟಿದ್ದಾರೆ? ಎಷ್ಟು ಖರ್ಚಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.