ಶಾಸಕ ಮುನಿರತ್ನ ಜಾಮೀನು ಅರ್ಜಿ: ತೀರ್ಪು ಸೆ.19ಕ್ಕೆ ಕಾಯ್ದಿರಿಸಿದ ನ್ಯಾಯಾಲಯ
ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಮೂರ್ತಿ ಸಂತೋಷ್ ಗಜಾನನ ಭಟ್ ಸೆ.19ಕ್ಕೆ ಕಾಯ್ದಿರಿಸಿದ್ದಾರೆ.
ದೂರುದಾರ ವೇಲು ನಾಯ್ಕರ್ ಪರ ಸೂರ್ಯ ಮುಕುಂದರಾಜ್ ವಾದ ಮಂಡಿಸಿ, ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಶಾಸಕರ ಕಚೇರಿಯಲ್ಲಿ ಘಟನೆಯಾಗಿರುವುದರಿಂದ ಜಾಮೀನು ನೀಡಬಾರದು ಎಂದು ವಾದಿಸಿದರು.
ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, 2015 ರಿಂದ 2020ರವರೆಗೆ ದೂರುದಾರ ಪಾಲಿಕೆ ಸದಸ್ಯರಾಗಿದ್ದರು. ನಂತರ ಭಿನ್ನಾಭಿಪ್ರಾಯ ಬಂದಿತ್ತೆಂದು ದೂರಿನಲ್ಲಿ ಹೇಳಲಾಗಿದೆ. 2015ರಿಂದ ಯಾವಾಗ ನಿಂದಿಸಿದ್ದರೆಂದು ಹೇಳಿಲ್ಲ 3 (1) r, s ಸೆಕ್ಷನ್ ಅನ್ವಯಿಸುವುದಿಲ್ಲವೆಂದು ಎಸ್ ಪಿಪಿ ಒಪ್ಪಿಕೊಂಡಿದ್ದಾರೆ. 3 (1) u ಅಡಿಯೂ ದೂರಿನಲ್ಲಿನ ಆರೋಪ ಅನ್ವಯವಾಗುವುದಿಲ್ಲ. 41 ಎ ಅಡಿ ನೋಟಿಸ್ ನೀಡಬೇಕಿತ್ತು. ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು.
ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ ನ್ಯಾ.ಸಂತೋಷ್ ಗಜಾನನ ಭಟ್, ನಾಳೆಗೆ (ಸೆ.19) ಆದೇಶ ಕಾಯ್ದಿರಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಕಿರುಕುಳ, ಜಾತಿ ನಿಂದನೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದಾಖಲಾದ ನಂತರ ಸೆ.14ರಂದು ಕೋಲಾರದಲ್ಲಿ ಮುನಿರತ್ನರನ್ನು ಬಂಧಿಸಲಾಗಿತ್ತು.
ಮೊದಲ ಎಫ್ಐಆರ್ ನಲ್ಲಿ ಮುನಿರತ್ನ ವಿರುದ್ಧ ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ, ಸುಲಿಗೆ ಮಾಡಲು ವ್ಯಕ್ತಿಯನ್ನು ಗಾಯಗೊಳಿಸುವ ಭಯ, ವಂಚನೆ ಮತ್ತು ಸ್ವಯಂಪ್ರೇರಿತವಾಗಿ ಸಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.