ಖಾಸಗಿ ಕೋಚಿಂಗ್ ಸೆಂಟರ್ ಗಳನ್ನು ನಿಷೇಧಿಸಿ: ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು: ಖಾಸಗಿ ಕೋಚಿಂಗ್ ಸೆಂಟರ್ ಗಳನ್ನು(ತರಬೇತು ಕೇಂದ್ರಗಳನ್ನು) ನಿಯಂತ್ರಿಸುವ ಬದಲು ಪೂರ್ಣವಾಗಿ ನಿಷೇಧಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ., ಆಗ್ರಹಿಸಿದ್ದಾರೆ.
ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ಕೇಂದ್ರ ಉನ್ನತ ಶಿಕ್ಷಣ ಇಲಾಖೆಯು ಜ.16ರಂದು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಗಳಿಗೆ ಪತ್ರ ಬರೆದು, ಯಾವುದೇ ಅಧಿಕೃತ ನೀತಿ ಅಥವಾ ನಿಯಂತ್ರಣದ ಅನುಪಸ್ಥಿತಿಯಲ್ಲಿ, ದೇಶದಲ್ಲಿ ಅನಿಯಂತ್ರಿತ ಖಾಸಗಿ ಮಾಲೀಕತ್ವದ ಕೋಚಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ತರಬೇತು ಕೇಂದ್ರಗಳು ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ, ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುವ ಮೂಲಕ ವಿದ್ಯಾರ್ಥಿಗಳ ಆತ್ಮಹತ್ಯೆ, ಬೆಂಕಿ ಅವಘಡಗಳಿಂದ ಜೀವಹಾನಿ ಹಾಗೂ ಹಲವಾರು ಅವ್ಯವಹಾರಗಳ ತಾಣವಾಗಿರುವುದನ್ನು ಅಧಿಕೃತವಾಗಿ ಶಿಕ್ಷಣ ಇಲಾಖೆ ಪತ್ರದಲ್ಲಿ ದಾಖಲಿಸಿದೆ ಎಂದಿದ್ದಾರೆ.
ಈ ಮಾರ್ಗಸೂಚಿಯ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಹೆಸರಿನಲ್ಲಿ ಸಮರ್ಥಿಸಿಕೊಂಡಿರುವುದು ಶಿಕ್ಷಣದ ಪರಿಕಲ್ಪನೆ ಹಾಗು ವ್ಯಾಖ್ಯಾನವನ್ನು ಅನರ್ಥಗೊಳಿಸುವ ಪ್ರಯತ್ನವಾಗಿದೆ. ಹೆಚ್ಚುವರಿ ಸಾಂಸ್ಥಿಕ ವ್ಯವಸ್ಥೆಗಳಂತಿರುವ ಕೋಚಿಂಗ್ ಸೆಂಟರ್ ಗಳನ್ನು ಅಧಿಕೃತಗೊಳಿಸುವ ಮೂಲಕ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಮಾಲೀಕತ್ವದ ನೆಲೆಯ ವ್ಯಾಪಾರದ ಕೇಂದ್ರಗಳನ್ನಾಗಿಸುವ ಈ ಕ್ರಮ ವಿದ್ಯಾರ್ಥಿ ಹಾಗೂ ಪಾಲಕ ವಿರೋಧಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರಿ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ಬಹುಜನ ಸಮಾಜದ ಮಕ್ಕಳು ಖಾಯಂ ಶಿಕ್ಷಕರಿಲ್ಲದೆ, ಕಲಿಕೆಯಿಲ್ಲದೆ ಕೊನೆಗೆ ಮಾಹಿತಿಯೂ ಇಲ್ಲದೆ ಶಿಕ್ಷಣವನ್ನು ತೊರೆಯುವಂತೆ ಮಾಡಲಾಗಿದೆ. ಶಾಲಾ-ಕಾಲೇಜುಗಳಿಗೆ ಸಮಾನಾಂತರ ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂ.ಗಳನ್ನು ಖರ್ಚುಮಾಡುವ ಸಾಮಥ್ರ್ಯವುಳ್ಳ ಉಳ್ಳವರು ಉನ್ನತ ಶಿಕ್ಷಣ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರ್ಯಾಯ ವ್ಯವಸ್ಥೆ ಸೃಷ್ಟಿಸುವ ಕುತಂತ್ರವಾಗಿದೆ ಎಂದು ಟೀಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಶಿಕ್ಷಣ ಹಕ್ಕು ಕಾಯಿದೆಯ ಪ್ರಕರಣ 28 ಅಡಿಯಲ್ಲಿ ಯಾವುದೇ ಶಿಕ್ಷಕರು ಖಾಸಗಿ ಬೋಧನೆ ಅಥವಾ ಮನೆ ಪಾಠದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ನಿಷೇಧ ಹೇರಿರುವ ಮಾದರಿಯಲ್ಲಿಯೇ, ಮೂಲ ಶಿಕ್ಷಣದ ಕಲ್ಪನೆಗೆ ಅಪವಾದವಾಗಿರುವ ಎಲ್ಲ ಬಗೆಯ ಕೋಚಿಂಗ್ ಕೇಂದ್ರಗಳನ್ನು ನಿಷೇಧಿಸಿ, ಶಾಲಾ-ಕಾಲೇಜುಗಳಲ್ಲಿಯೇ ಎಲ್ಲ ಬಗೆಯ ಬೆಂಬಲಿತ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.