ಬೆಂಗಳೂರು | 1.45 ಕೋಟಿ ರೂ. ಮೌಲ್ಯದ ನಿಷೇಧಿತ ನಿಕೋಟಿನ್ ಜಪ್ತಿ: 9 ಮಂದಿ ಸಿಸಿಬಿ ವಶಕ್ಕೆ
ಬೆಂಗಳೂರು: ಪ್ರಕರಣವೊಂದರ ತನಿಖೆ ನಡೆಸಿ 1 ಕೋಟಿ 45 ಲಕ್ಷ ರೂ. ಮೌಲ್ಯದ ನಿಷೇಧಿತ ನಿಕೋಟಿನ್ ಉತ್ಪನ್ನಗಳನ್ನು ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು, ಒಟ್ಟು 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಡಿಲರ್ಸ್ ಹಾಗೂ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಬೆಂಗಳೂರಿನ ಚಾಮರಾಜಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿಸಲ್ಪಟ್ಟ ತಂಬಾಕು, ನಿಕೋಟಿನ್ ಉತ್ಪನ್ನಗಳನ್ನು ಯಾವುದೇ ಪರವಾನಗಿ ಹೊಂದದೇ ಸಂಗ್ರಹಿಸಿ ಇಟ್ಟುಕೊಂಡಿರುವ ಕುರಿತು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದರು.
ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ಅಪ್ಜಲ್ ಎಂಬ ಹೆಸರಿನ ಮೊಲಾಸಿಸ್, ದಿಲ್‍ಬಾಗ್, ಜೆಡ್ ಬಾದ್‍ಷಾ, ಮಹಾರಾಯಲ್-717 ಹಾಗೂ ಇನ್ನಿತರೆ ಉತ್ಪನ್ನಗಳನ್ನು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಮಾರಾಟ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಕುರಿತು ಖಚಿತ ಮಾಹಿತಿ ದೊರೆತಿದ್ದ ಮೇರೆಗೆ ಮೂರು ಠಾಣಾ ಸರಹದ್ದಿನಲ್ಲಿ ದಾಳಿ ನಡೆಸಿ, ಒಟ್ಟು 9 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ದಾಳಿ ಸಮಯದಲ್ಲಿ ಸುಮಾರು 1ಕೋಟಿ 45 ಲಕ್ಷ ರೂ. ಮೌಲ್ಯದ ತಂಬಾಕು, ನಿಕೋಟಿನ್ ಉತ್ಪನ್ನಗಳು, 11 ಮೊಬೈಲ್ ಫೋನ್‍ಗಳು, 1,10,260 ರೂಪಾಯಿ ಹಣ, ಒಂದು ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದರು.