ಬೆಂಗಳೂರು| ವ್ಯಕ್ತಿಯೊಬ್ಬರಿಗೆ 1.98 ಕೋಟಿ ರೂ. ವಂಚನೆ: ಪ್ರಕರಣ ದಾಖಲು
ಬೆಂಗಳೂರು: ‘ಮಾದಕ ಪದಾರ್ಥಗಳನ್ನು ವಿದೇಶಕ್ಕೆ ಕೊರಿಯರ್ ಮಾಡಲು ನಿಮ್ಮ ಆಧಾರ್ ನಂಬರ್ ಬಳಕೆಯಾಗಿದೆ’ ಎಂದು ಕರೆ ಮಾಡಿದ್ದ ಆರೋಪಿ, ವ್ಯಕ್ತಿಯೊಬ್ಬರ ಖಾತೆಯಿಂದ 1.98 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
52 ವರ್ಷ ವಯಸ್ಸಿನ ಎಚ್.ಎಸ್.ಆರ್ ಲೇಔಟ್ ನಿವಾಸಿಯೊಬ್ಬರು ನೀಡಿರುವ ದೂರಿನನ್ವಯ ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ದೂರುದಾರ ವ್ಯಕ್ತಿಗೆ ಡಿ.2ರಂದು ಕೊರಿಯರ್ ಕಂಪೆನಿಯವರ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಆಧಾರ್ ನಂಬರ್ ಬಳಸಿಕೊಂಡು ಮುಂಬೈನಿಂದ ತೈವಾನ್‍ಗೆ ಅವ್ಯವಹಾರಿಕ ವಸ್ತುಗಳು, ಎಂಡಿಎಂಎ ಮಾದಕ ಪದಾರ್ಥವನ್ನು ಕೊರಿಯರ್ ಮಾಡಲಾಗಿದೆ. ಮುಂಬೈ ಸೈಬರ್ ಕ್ರೈಂ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಬೆದರಿಸಿದ್ದರು.
ನಂತರ ಅದನ್ನು ಪರಿಶೀಲಿಸಬೇಕಾಗುತ್ತದೆ ಎಂದು ವಿಡಿಯೋ ಕರೆ ಮಾಡಿ, ಬಳಿಕ ಆನ್‍ಲೈನ್ ಪೇಮೆಂಟ್ ಲಿಂಕ್ ಕಳಿಸಿ, ಓಟಿಪಿ ಪಡೆದುಕೊಂಡು ಬರೋಬ್ಬರಿ 1.98 ಕೋಟಿ ವರ್ಗಾಯಿಸಿಕೊಂಡಿದ್ದಾರೆ. ಘಟನೆ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.