ಬೆಂಗಳೂರು | ಮಾದಕ ವಸ್ತು ದಂಧೆ ಪ್ರಕರಣ : ತಾಯಿ, ಮಗಳು ಸೇರಿ ಮೂವರ ವಿರುದ್ಧ FIR ದಾಖಲು
ಬೆಂಗಳೂರು : ಮಾದಕ ವಸ್ತು ಸರಬರಾಜು ದಂಧೆಯಲ್ಲಿ ತೊಡಗಿದ್ದ ಪ್ರಕರಣದಡಿ ತಾಯಿ, ಮಗಳು ಸೇರಿದಂತೆ ಮೂವರು ವಿರುದ್ಧ ಬೆಂಗಳೂರಿನ ಕೇಂದ್ರ ಅಪರಾಧ ದಳದ(ಸಿಸಿಬಿ) ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.
ತಮ್ಮ 23 ವರ್ಷದ ಮಗನಿಗೆ ಮಾದಕ ಪದಾರ್ಥಗಳನ್ನು ಸರಬರಾಜು ಮಾಡಿ ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಲಾಗಿದೆ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ನೀಡಿರುವ ದೂರಿನನ್ವಯ ಯುಎಇ ಮೂಲದ ನತಾಲಿಯಾ ವಿರ್ವಾನಿ, ಲೀನಾ ವಿರ್ವಾನಿ ಹಾಗೂ ಬೆಂಗಳೂರಿನ ರಂಜನ್ ಎಂಬಾತನ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
‘ಆರೋಪಿ ನತಾಲಿಯಾ ವಿರ್ವಾನಿ ಹಾಗೂ ಲೀನಾ ವಿರ್ವಾನಿ ದುಬೈನಲ್ಲಿ ನೆಲೆಸಿದ್ದು, ಬೆಂಗಳೂರಿನಲ್ಲಿ ಸ್ಥಳಿಯ ವ್ಯಕ್ತಿಯಾಗಿರುವ ರಂಜನ್ ಎಂಬಾತನ ಮೂಲಕ ಹೈಡ್ರೋ ಗಾಂಜಾ, ಎಂಡಿಎಂಎ ಮಾದಕ ಪದಾರ್ಥಗಳನ್ನು ಸರಬರಾಜು ಮಾಡಿಸುತ್ತಿದ್ದಾರೆ ಎನ್ನಲಾಗಿದೆ.
ದುಬೈ ಹಾಗೂ ಬೆಂಗಳೂರಿನ ನಡುವೆ ಆಗಾಗ ಸಂಚರಿಸುವ ನತಾಲಿಯಾ, ಮಾದಕ ದಂಧೆಯಿಂದ ಗಳಿಸುವ ಹಣವನ್ನು ಪಡೆಯಲು ಖಾಸಗಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಆರೋಪಿಗಳು ತಮ್ಮ 23 ವರ್ಷ ವಯಸ್ಸಿನ ಮಗನಿಗೆ ಒತ್ತಾಯ ಪೂರ್ವಕವಾಗಿ ಮಾದಕ ಪದಾರ್ಥಗಳನ್ನು ಸೇವಿಸುವಂತೆ ಮಾಡಿದ್ದಾರೆ' ಎಂದು ಉದ್ಯಮಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರಿನನ್ವಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತರ ಕುರಿತು ವಿವರಗಳನ್ನು ಕಲೆಹಾಕಲಾಗುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದೇವೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.