ಬೆಂಗಳೂರು | 9 ಹೋಟೆಲ್, ರೆಸ್ಟೋರೆಂಟ್ ಮಾಲಕರಿಗೆ ಆಹಾರ ಇಲಾಖೆ ನೋಟಿಸ್
ಬೆಂಗಳೂರು : ಕಳಪೆ ಮಾಂಸ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನಗರದ 9 ಹೋಟೆಲ್, ರೆಸ್ಟೋರೆಂಟ್ ಮಾಲಕರಿಗೆ ಆಹಾರ ಇಲಾಖೆ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.
ಸದ್ಯ ಮಾಂಸ ವ್ಯಾಪಾರಿ ಅಬ್ದುಲ್ ರಝಾಕ್ ಅವರಿಂದ ಮಾಂಸ ಪಡೆಯುತ್ತಿದ್ದ ರೆಸ್ಟೋರೆಂಟ್, ಹೋಟೆಲ್ ಮಾಲಕರಿಗೆ ನೊಟೀಸ್ ನೀಡಲಾಗಿದ್ದು, ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಈಗಾಗಲೆ ಇಬ್ಬರು ವಿಚಾರಣೆಗೆ ಹಾಜರಾಗಿದ್ದು, ಉಳಿದವರು ನಾಳೆ(ಜು29) ವಿಚಾರಣೆಗೆ ಹಾಜರಾಗುವುದಾಗಿ ಮನವಿ ತಿಳಿಸಿರುವುದಾಗಿ ಗೊತ್ತಾಗಿದೆ.
ಮಾಂಸ ಮಾದರಿ ಸಂಗ್ರಹ: ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಸಾಗಾಟ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕೋಲ್ಡ್ ಸ್ಟೋರೇಜ್‍ನಲ್ಲಿರುವ ಮತ್ತು ಅಂಗಡಿಗಳಲ್ಲಿನ ಮಾಂಸಗಳ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. -18 ಡಿಗ್ರಿ ಸ್ಟೋರೇಜ್‍ನಲ್ಲಿಟ್ಟ ಮಾಂಸ ಹಾನಿಕಾರಕವಲ್ಲ. ಆದರೆ, ಅದಕ್ಕೆ ಬಳಸುವ ರಾಸಾಯನಿಕ ಅಪಾಯಕಾರಿ ಈ ಹಿನ್ನೆಲೆಯಲ್ಲಿ ಮಾಂಸದ ಮಾದರಿಗಳನ್ನು ಸಂಗ್ರಹಿಸುವಂತೆ ಆಹಾರ ಇಲಾಖಾ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.