ಬೆಂಗಳೂರು | ರಸ್ತೆಯಲ್ಲಿ ರಾಶಿ ಮೊಳೆಗಳು ಪತ್ತೆ: ಹೆಕ್ಕಿ ತೆಗೆದ ಟ್ರಾಫಿಕ್ ಪೊಲೀಸ್!
ಬೆಂಗಳೂರು : ನಗರದ ಜಾಲಹಳ್ಳಿಯ ಕುವೆಂಪು ವೃತ್ತದ ಅಂಡರ್ ಪಾಸ್ ರಸ್ತೆಯಲ್ಲಿ ಮುಷ್ಟಿಗಟ್ಟಲೇ ಮೊಳೆಗಳು ಪತ್ತೆಯಾಗಿದ್ದು, ಸೋಮವಾರ ಈ ಮೊಳೆಗಳನ್ನು ಟ್ರಾಫಿಕ್ ಪೊಲೀಸರು ಹೆಕ್ಕಿ ತೆಗೆದಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮೊಳೆಗಳು ರಸ್ತೆ ಮೇಲೆ ಬಿದ್ದಿರುವುದರ ಹಿಂದೆ ಸುತ್ತಮುತ್ತಲಿನ ಪಂಕ್ಚರ್ ಶಾಪ್‍ಗಳ ಕೈವಾಡವಿರಬಹುದೇ, ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಎಕ್ಸ್ ಖಾತೆಯಲ್ಲಿ ಸಂಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಇದಕ್ಕೆ ಜಾಲಹಳ್ಳಿ ಟ್ರಾಫಿಕ್ ಪೊಲೀಸ್ ವಲಯ ಪ್ರತಿಕ್ರಿಯಿಸಿದ್ದು, ಕುವೆಂಪು ವೃತ್ತದ ಅಂಡರ್ ಪಾಸ್‍ನಲ್ಲಿ ಬಿದ್ದಿದ್ದ ಮೊಳೆಗಳಿಂದ ವಾಹನಗಳು ಪಂಕ್ಚರ್ ಆಗುತ್ತಿರುವುದನ್ನು ಗಮನಿಸಿದ ಠಾಣೆಯ ಸಿಬ್ಬಂದಿ, ಮೊಳೆಗಳನ್ನು ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ಬಗ್ಗೆ ನಿಗಾ ವಹಿಸಲಾಗುವುದು ಎಂದು ತಿಳಿಸಿದೆ.
Next Story