ಬೆಂಗಳೂರು | ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ (PC:Meta AI)
ಬೆಂಗಳೂರು : ಪೊಲೀಸ್ ಸಿಬ್ಬಂದಿಯಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಶಿವಾಜಿನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗದಲ್ಲಿ ನೀಡಿದ್ದ ದೂರು ಹಿಂಪಡೆಯುವುದಾಗಿ 25 ಸಾವಿರ ರೂ. ವಸೂಲಿ ಮಾಡಿದ್ದ ಆರೋಪದ ಮೇಲೆ ಸೈಯ್ಯದ್ ಸರ್ಫರಾಜ್ ಅಹಮದ್(35) ಎಂಬುವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜು.24ರಂದು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಮೊಹಮ್ಮದ್ ಇರ್ಷಾದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೂ ಮೊಹಮ್ಮದ್ ಇರ್ಷಾದ್ಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಹ, ಆತನನ್ನು ಕಾನೂನುಬಾಹಿರವಾಗಿ ಪೊಲೀಸ್ ಕಸ್ಟಡಿಯಲ್ಲಿರಿಸಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗದಲ್ಲಿ ಸೈಯ್ಯದ್ ಸರ್ಫರಾಜ್ ದೂರು ನೀಡಿದ್ದರು.
ಬಳಿಕ ದೂರು ಹಿಂಪಡೆದುಕೊಳ್ಳಲು 50 ಸಾವಿರ ರೂ. ನೀಡುವಂತೆ ಸೈಯ್ಯದ್ ಸರ್ಫರಾಜ್ ಪೊಲೀಸರ ಬಳಿಯೇ ಬೇಡಿಕೆಯಿಟ್ಟಿದ್ದ. ಅಲ್ಲದೇ ಜು.29ರಂದು ಕ್ವೀನ್ಸ್ ರಸ್ತೆಯ ಬಳಿ ಪೊಲೀಸರಿಂದಲೇ 25 ಸಾವಿರ ರೂ. ಪಡೆದುಕೊಂಡಿದ್ದ ಎನ್ನಲಾಗಿದೆ. ಬಳಿಕ ಆತನನ್ನು ವಶಕ್ಕೆ ಪಡೆಯುವಷ್ಟರಲ್ಲಿ ಪರಾರಿಯಾಗಿದ್ದ.
ಈ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸದ್ಯ ಆತನನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.