ಬೆಂಗಳೂರು | ಕಾಫಿ ಶಾಪ್‌ನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ : ಸಿಬ್ಬಂದಿಯ ಬಂಧನ
ಬೆಂಗಳೂರು : ಇಲ್ಲಿನ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಶಾಪ್‌ನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇರಿಸಿ, ಗೌಪ್ಯವಾಗಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಓರ್ವನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಮನೋಜ್ (23) ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮನೋಜ್ ಶಾಫ್‍ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದ. ವಾಶ್ ರೂಮ್‍ನ ಶೌಚಾಲಯದ ಡಸ್ಟ್ ಬಿನ್‍ನಲ್ಲಿ ಕಿಂಡಿ ಸೃಷ್ಟಿಸಿದ್ದ ಆರೋಪಿ, ಮೊಬೈಲ್ ಫೋನ್‍ನ ಕ್ಯಾಮರಾವನ್ನು ಶೌಚಾಲಯದತ್ತ ರೆಕಾರ್ಡಿಂಗ್ ಆನ್ ಮಾಡಿ ಇರಿಸಿದ್ದ. ಮಹಿಳೆಯೊಬ್ಬರು ವಾಶ್ ರೂಮ್‍ಗೆ ಹೋದಾಗ ಶೌಚಾಲಯದಲ್ಲಿ ಮೊಬೈಲ್ ಇರಿಸಿರುವುದು ಹಾಗೂ ಸುಮಾರು 2 ಗಂಟೆಗಳಷ್ಟು ವಿಡಿಯೊ ರೆಕಾರ್ಡಿಂಗ್ ಆಗಿರುವುದು ಪತ್ತೆಯಾಗಿತ್ತು.
ತಕ್ಷಣವೇ ಆ ಮಹಿಳೆ ಕೆಫೆ ಸಿಬ್ಬಂದಿ ಹಾಗೂ ಪೊಲೀಸರಿಗೆ ವಿಚಾರ ತಿಳಿಸಿದ್ದರು ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಕೆಫೆಯ ಸಿಬ್ಬಂದಿಯೇ ಮೊಬೈಲ್ ಇರಿಸಿರುವುದು ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕ್ಷಮೆ: ಘಟನೆಯ ಕುರಿತು ಕ್ಷಮೆಯಾಚಿಸಿರುವ ಥರ್ಡ್ ವೇವ್ ಕಾಫಿ ಕೆಫೆಯ ಆಡಳಿತ ಮಂಡಳಿ, ಗ್ರಾಹಕರ ಸುರಕ್ಷತೆ ಮತ್ತು ಕ್ಷೇಮ ನಮ್ಮ ಆದ್ಯತೆಯಾಗಿದೆ. ಆರೋಪಿತ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ. ಆರೋಪಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.