ಬೆಂಗಳೂರು | 3 ಕೋಟಿ ರೂ. ಮೌಲ್ಯದ ನಿಷೇಧಿತ ಇ-ಸಿಗರೇಟ್ ಸಂಗ್ರಹ: ಆರೋಪಿ ಬಂಧನ
Photo : ( PTI )
ಬೆಂಗಳೂರು: ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಕೇರಳ ಮೂಲದ ಶೋಯೆಬ್ ಎಂಬುವರನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 3 ಕೋಟಿ ರೂ. ಮೌಲ್ಯದ 6 ಸಾವಿರ ಇ-ಸಿಗರೇಟುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಶೋಯೆಬ್ ಕೆಲ ಕಾಲ ದುಬೈನಲ್ಲಿದ್ದು, ಬಳಿಕ ಬೆಂಗಳೂರಿಗೆ ಬಂದು ಸುದ್ದಗುಂಟೆಪಾಳ್ಯದ ಸಹೋದರನ ಮನೆಯಲ್ಲಿ ವಾಸವಿದ್ದ. ದುಬೈಯಿಂದ ದಿಲ್ಲಿ, ದಿಲ್ಲಿಯಿಂದ ಬೆಂಗಳೂರಿಗೆ ಕೋರಿಯರ್ ಮೂಲಕ ಇ-ಸಿಗರೇಟ್ ತರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಮನೆಯಲ್ಲಿಯೇ ಅವುಗಳನ್ನು ಸಂಗ್ರಹಿಸಿಟ್ಟುಕೊಂಡು ಗಿರಾಕಿಗಳಿಗೆ ಸರಬರಾಜು ಮಾಡುತ್ತಿದ್ದ. ಆರೋಪಿಯ ಕುರಿತು ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಆತನನ್ನು ಬಂಧಿಸಿದ್ದು ಕ್ರಮ ಜರುಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.