ಬೆಂಗಳೂರು | ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ನಗರದ ಹೊಂಗಸಂದ್ರದ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಜಯಮ್ಮ ಎಂದು ಗುರುತಿಸಲಾಗಿದೆ. ಜಯಮ್ಮ ಕರೆಗಳನ್ನು ಸ್ವೀಕರಿಸದಿದ್ದಾಗ ಆಕೆಯ ಸ್ನೇಹಿತರೊಬ್ಬರು ಮನೆಗೆ ಪರೀಕ್ಷಿಸಲು ಬಂದಿದ್ದಾರೆ. ಎಷ್ಟು ಬಾಗಿಲು ಬಡಿದರೂ ತೆರೆಯದ ಕಾರಣ ಮನೆ ಮಾಲಕರಿಗೆ ಮಾಹಿತಿ ನೀಡಿದ್ದು, ಬೇರೆ ಕೀಯೊಂದಿಗೆ ಬಾಗಿಲು ತೆರೆದಾಗ ಆಕೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಲೆಯಲ್ಲಿ ಒಂದು ಗಾಯದ ಗುರುತು ಹೊರತುಪಡಿಸಿ ಬೇರೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
20 ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿದ್ದ ಜಯಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಬಸ್ ಚಾಲಕನಾಗಿ ಆನೇಕಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಕೆಯ ಕಿರಿಯ ಮಗ ಪೊಲೀಸರಿಂದ ತಾಯಿಯ ಸಾವಿನ ಬಗ್ಗೆ ತಿಳಿದುಕೊಂಡಿದ್ದಾನೆ. ಜಯಮ್ಮ ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಳು. ಹಿರಿಯ ಮಗನೊಂದಿಗೆ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.