ಬೆಂಗಳೂರು | 2 ವರ್ಷದಿಂದ ಯೆಮನ್ ಯುವಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಬುಲೆಟ್ ಹೊರ ತೆಗೆದ ವೈದ್ಯರು
ಸಾಂದರ್ಭಿಕ ಚಿತ್ರ Photo: ndtv
ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ನಗರದ ಆಸ್ಟರ್ ಆರ್ ವಿ ಆಸ್ಪತ್ರೆ ವೈದ್ಯರು, ಯೆಮೆನ್ ಮೂಲದ 21 ವರ್ಷದ ಯುವಕನ ಎದೆಗೋಡಿನಲ್ಲಿ ಸುಮಾರು ಎರಡು ವರ್ಷಗಳಿಂದ ಸಿಲುಕಿದ್ದ ಬುಲೆಟ್ ಅನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಕಫದಲ್ಲಿ ರಕ್ತ ಹೊಂದಿದ್ದ ವಾಸಿಮ್ (ಹೆಸರು ಬದಲಾಯಿಸಲಾಗಿದೆ) ಶ್ವಾಸಕೋಶ ತಜ್ಞರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದು, ಎದೆ ಗೋಡೆಯೊಳಗೆ ಲೋಹದ ವಸ್ತು ಇರುವುದನ್ನು ಎಕ್ಸ್-ರೇ ಮೂಲಕ ಗೊತ್ತಾಗಿತ್ತು. ಯುದ್ಧ ಪೀಡಿತ ಯೆಮೆನ್ನಿಂದ ಬಂದ ಯುವಕನಿಗೆ ಆಸ್ಪತ್ರೆಯ ವೈದ್ಯರು ಹೊಸ ಜೀವನ ಕಲ್ಪಿಸಿಕೊಟ್ಟಿದ್ದಾರೆ.
ಯುವಕನಿಗೆ ಗುಂಡಿನ ಚಕಮಕಿಯ ವೇಳೆಯಲ್ಲಿ ಬುಲೆಟ್ ದಾಳಿಗೆ ಒಳಗಾಗಿದ್ದು, ಆ ಪೈಕಿ ಒಂದು ಬುಲೆಟ್ ಆತನ ಬಲ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡಿತ್ತು. ದೇಹದ ಮೇಲಿನ ಗಾಯಗಳು ಮಾಸಿಹೋದರೂ, ಸಿಕ್ಕಿಹಾಕಿಕೊಂಡಿದ್ದ ಬುಲೆಟ್ ನಿರಂತರ ನೋವಿನ ಮೂಲವಾಗಿ ಉಳಿದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ತಜ್ಞ ವೈದ್ಯ ಡಾ.ದಿವಾಕರ್ ಭಟ್ ಮಾತನಾಡಿ, ‘ಶಸ್ತ್ರಚಿಕಿತ್ಸೆಯ ನಂತರ, ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇದು ಒಂದು ರೀತಿಯ ವಿಭಿನ್ನ ಪ್ರಕರಣವಾಗಿದೆ. ನಮ್ಮ ತಂಡದ ನಡುವಿನ ಸಮನ್ವಯತೆ, ರೋಗಿ ಮತ್ತು ಆತನ ಕುಟುಂಬವು ಚಿಕಿತ್ಸೆಯಲ್ಲಿಟ್ಟಿದ್ದ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಬಣ್ಣಿಸಿದ್ದಾರೆ.