ಬೆಂಗಳೂರು: ಮಾಲ್ಡೀವ್ಸ್ ಅಧ್ಯಕ್ಷರಿಗೆ ಆತ್ಮೀಯ ಬೀಳ್ಕೊಡುಗೆ
ಬೆಂಗಳೂರು, ಅ.10: ಬೆಂಗಳೂರು ಭೇಟಿಗಾಗಿ ಆಗಮಿಸಿದ್ದ ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷ ಡಾ.ಮುಹಮ್ಮದ್ ಮುಯಿಝ್ಝು ಮತ್ತು ಪ್ರಥಮ ಮಹಿಳೆ ಸಾಜಿದಾ ಮುಹಮ್ಮದ್ ಹಾಗೂ ಅವರ ನಿಯೋಗವನ್ನು ಇಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಆತ್ಮೀಯವಾಗಿ ಬೀಳ್ಕೊಟ್ಟರು.
ಮಾಲ್ಡೀವ್ಸ್ ಅಧ್ಯಕ್ಷರ ನಿಯೋಗವು ಅ.9ರಂದು ರಾಜಭವನ ಕಚೇರಿಗೆ ಭೇಟಿ ನೀಡಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯೊಂದಿಗೆ ಮಾಲ್ಡೀವ್ಸ್ ನ ವಾಣಿಜ್ಯ ವ್ಯವಹಾರ ಮತ್ತಿತರ ಚಟುವಟಿಕೆಗಳ ಬಗ್ಗೆ ಚರ್ಚಿಸಿತು. ನಂತರ ರಾಜಭವನದಲ್ಲಿ ರಾಜ್ಯಪಾಲರು ಆಯೋಜಿಸಲಾಗಿದ್ದ ಭೋಜನ ಕೂಟದಲ್ಲಿ ಭಾಗವಹಿಸಿತ್ತು.
ನಂತರ ಹೊಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ದೇಶದ ಮತ್ತು ರಾಜ್ಯದ ವಾಣಿಜ್ಯೋದ್ಯಮಿಗಳೊಂದಿಗೆ ಹಮ್ಮಿಕೊಳ್ಳಲಾದ ಸಭೆಗಳಲ್ಲಿ ಭಾಗವಹಿಸಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿ ಇಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್ ಗೆ ಪ್ರಯಾಣಿಸಿತು.
ಈ ಸಂದರ್ಭದಲ್ಲಿ ಇಂಡಿಯಾ ಮಾಲ್ಡೀವ್ಸ್ ಹೈ ಕಮಿಷನರ್ ಮುನು ಮಹವರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಸತ್ಯವತಿ ಜಿ., ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಪ್ರಾದೇಶಿಕ ಪಾಸ್ ಪೋರ್ಟ್ ಆಧಿಕಾರಿ ಕೃಷ್ಣ. ಕೆ. ಸೇರಿದಂತೆ ಗಣ್ಯರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.