ಬೆಂಗಳೂರು | ಮೆಟ್ರೋ ಹಳಿಗೆ ಜಿಗಿದು ಯುವಕ ಆತ್ಮಹತ್ಯೆ ; ರೈಲು ಸಂಚಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರು: ನಗರದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುವಾಗ ಯುವಕನೋರ್ವ ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ದೇಹ ಛಿದ್ರವಾಗಿರುವ ದುರ್ಘಟನೆ ಜರುಗಿದೆ.
ಗುರುವಾರ ಮಧ್ಯಾಹ್ನ ಸುಮಾರು 2.10 ಗಂಟೆ ಸುಮಾರಿಗೆ ಇಲ್ಲಿನ ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಕಡೆಗೆ ಹೋಗುವ ಮಾರ್ಗಮಧ್ಯೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಧ್ರುವ್ ಟಕ್ಕರ್ ಎಂದು ಗುರುತಿಸಲಾಗಿದೆ.
ಮೆಟ್ರೋ ರೈಲು ಬರುವ ಹಲವು ನಿಮಿಷಗಳ ಕಾಲ ಮೊದಲೇ ಧ್ರುವ್ ಟಕ್ಕರ್ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದ. ನಂತರ ನಿಲ್ದಾಣದ ಬಲ ಭಾಗದ ತುದಿಗೆ ಹೋಗಿ ನಿಂತಿದ್ದು, ಈತನೊಂದಿಗೆ ಓರ್ವ ಯುವತಿ ಹಾಗೂ ಮತ್ತೊರ್ವ ಯುವಕ ಇದ್ದರು. ಮೂವರು ಮಾತನಾಡುತ್ತಾ ನಿಂತಿದ್ದರು. ನಂತರ ರೈಲು ಬರುವ ವೇಳೆಗೆ ಧ್ರುವ್, ಏಕಾಏಕಿ ಹಳಿಯ ಮೇಲೆ ಹಾರಿದ್ದಾನೆ ಎನ್ನಲಾಗಿದೆ.
ಜೊತೆಗಿದ್ದವರು ಎಳೆದುಕೊಳ್ಳುವ ಪ್ರಯತ್ನ ಮಾಡಿದರೂ ರೈಲಿನ ರಭಸಕ್ಕೆ ರುಂಡ-ಮುಂಡ ಬೇರೆಯಾಗಿದೆ. ರೈಲಿನ ಕೆಳಗೆ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.
ಘಟನೆ ಸಂಬಂಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಪ್ರತಿಕ್ರಿಯಿಸಿ, ಮೃತ ಧ್ರುವ್ ಟಕ್ಕರ್ ಮಹಾರಾಷ್ಟ್ರದ ಮುಂಬೈ ಮೂಲದವನು. ಈತ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿ. ಸದ್ಯ ವಿದ್ಯಾರ್ಥಿ ಸಾವಿನ ಬಗ್ಗೆ ಕಾಲೇಜು ಮತ್ತು ಆತನ ಕುಟುಂಬಕ್ಕೆ ಪೊಲೀಸರು ಮಾಹಿತಿ ರವಾನಿಸಿದ್ದು, ಧ್ರುವ್ ಟಕ್ಕರ್ ಏಕೆ ಆತ್ಮಹತ್ಯೆ ಮಾಡಿಕೊಂಡ? ಆತ್ಮಹತ್ಯೆಗೆ ಕಾರಣವೇನು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿಸಿದರು.
ನಿಂತ ಮೆಟ್ರೋ: ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಕೆಲಕಾಲ ನೆರಳೆ ಮಾರ್ಗದ ಮೆಟ್ರೋ ಸಂಚಾರವನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಯುವಕನ ಮೃತದೇಹ ತೆರವುಗೊಳಿಸಿದ ನಂತರ, ಮಾಗಡಿ ರಸ್ತೆ ಚಲ್ಲಘಟ್ಟ ಮೆಟ್ರೋ ಸಂಚಾರ ಪುನಾರಂಭ ಮಾಡಲಾಯಿತು.