ಬೆಂಗಳೂರು | ಕಾನೂನು ಬಾಹಿರವಾಗಿ ಆಟೋ ಜಪ್ತಿ ಮಾಡಿದ ಆರೋಪ: ಇಬ್ಬರು ಸೆರೆ
ಬೆಂಗಳೂರು: ರಿಕವರಿ ಏಜೆಂಟ್ ಎಂದು ಹೇಳಿ ಆಟೋ ಚಾಲಕನಿಗೆ ಧಮ್ಕಿ ಹಾಕಿ ಕಾನೂನು ಬಾಹಿರವಾಗಿ ಆಟೋ ಜಪ್ತಿ ಮಾಡಿದ ಆರೋಪದಡಿ ಇಬ್ಬರನ್ನು ಇಲ್ಲಿನ ತಿಲಕ್‍ನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಿಟಿಎಂ ನಿವಾಸಿಯಾಗಿರುವ ಆಟೋ ಚಾಲಕ ಜಗನ್ನಾಥ ಎಂಬುವರು ನೀಡಿದ ದೂರಿನ ಮೇರೆಗೆ ಸಲ್ಮಾನ್ ಹಾಗೂ ಪಠಾಣ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಜಿ. ರಸ್ತೆಯಲ್ಲಿರುವ ವರ್ಧಮಾನ್ ಫೈನಾನ್ಸ್ ಕಂಪೆನಿಯಲ್ಲಿ ಆಟೋ ಚಾಲಕ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಮಧ್ಯವರ್ತಿ ಹಾಗೂ ಡೀಲರ್ ಆಗಿದ್ದ ರಂಗಸ್ವಾಮಿ ಇದಕ್ಕೆ ನಾಮಿನಿ ಆಗಿದ್ದರು. ಮೊದಲ ಎರಡು ತಿಂಗಳು ಸಾಲದ ಕಂತನ್ನು ಜಗನ್ನಾಥ ಪಾವತಿಸಿದ್ದರು. ಮಾರ್ಚ್‍ನಲ್ಲಿ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ರಂಗಸ್ವಾಮಿ ಆರೋಪಿತರನ್ನು ಸಂಪರ್ಕಿಸಿ ಆಟೋ ಜಪ್ತಿ ಮಾಡುವಂತೆ ಹೇಳಿದ್ದ. ಅದರಂತೆ ಮಾ.25ರ ಸೋಮವಾರ ರಾತ್ರಿ ಪ್ಯಾಸೆಂಜರ್ ಹತ್ತಿಸಿಕೊಂಡು ಬಿಟಿಎಂ ಲೇಔಟ್ ಕಡೆ ಹೋಗುವಾಗ ಆರು ಮಂದಿ ಯುವಕರು ಜಗನ್ನಾಥ ಅವರ ಆಟೋಗೆ ಅಡ್ಡ ಹಾಕಿ ಕರ್ನಾಟಕ ರಿಕವರಿ ಏಜೆನ್ಸಿ ಎಂದು ಹೇಳಿ ಗಾಡಿ ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡದಂತೆ ಮನವಿ ಮಾಡಿದರೂ ಸೊಪ್ಪು ಹಾಕದೆ ಡೀಲರ್ ಆಗಿರುವ ರಂಗಸ್ವಾಮಿ ಎಂಬಾತ ಕಾನೂನು ಗಾಳಿಗೆ ತೂರಿ ಅವರ ಸೂಚನೆಯಂತೆ ಆರೋಪಿತರಿಂದ ಬಲವಂತವಾಗಿ ಆಟೋ ಕೀಯನ್ನು ಕಸಿದುಕೊಂಡು ಜಪ್ತಿ ಮಾಡಿದ್ದಾರೆ ಎಂದು ಜಗನ್ನಾಥ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಡೀಲರ್ ಆಗಿರುವ ರಂಗಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.