ಬೆಂಗಳೂರು | ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ : ಪುನೀತ್ ಕೆರೆಹಳ್ಳಿ ಬಂಧನ
ಪೊಲೀಸರ ವಶದಲ್ಲಿದ್ದಾಗ ಅಸ್ವಸ್ಥಗೊಂಡ ಪುನೀತ್ ಕೆರೆಹಳ್ಳಿ ಆಸ್ಪತ್ರೆಗೆ ದಾಖಲು
ಬೆಂಗಳೂರು : ಮೆಜೆಸ್ಟಿಕ್ ನ ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿಯೊಬ್ಬರು ತೆಗೆದುಕೊಂಡು ಹೋಗುತ್ತಿದ್ದ ಕುರಿ ಮಾಂಸದ ಬಾಕ್ಸ್ ಗಳನ್ನು ತೆಗೆಸಿ ಈ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಸಾಕ್ಷ್ಯಾಧಾರ ರಹಿತ ಆರೋಪ ಮಾಡಿರುವ ಘಟನೆ ಶುಕ್ರವಾರ ವರದಿಯಾಗಿತ್ತು. ಈ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಂಘಪರಿವಾರದ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ತಡರಾತ್ರಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಬಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್ ಗಳಲ್ಲಿ 4,500 ಕೆಜಿ ಮಾಂಸವಿತ್ತು. ಆದರೆ ಈ ಬಾಕ್ಸ್ ಗಳಲ್ಲಿ ಕುರಿಯ ಮಾಂಸದೊಂದಿಗೆ ನಾಯಿ ಮಾಂಸವನ್ನು ಮಿಶ್ರಣ ಮಾಡಲಾಗಿದೆ ಎಂದು ಆರೋಪಿಸಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ಬಾಕ್ಸ್ ಗಳು ಹೊರಗೆ ಬರುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲೇ ತಡೆದಿದ್ದರು.
ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸರ ವಶದಲ್ಲಿದ್ದಾಗ ಅಸ್ವಸ್ಥಗೊಂಡಿದ್ದ ಪುನೀತ್ ಕೆರೆಹಳ್ಳಿಯನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ವ್ಯಾಪಾರಿ ಅಬ್ದುಲ್ ರಝಾಕ್‍ಗೆ ನೋಟಿಸ್ ನೀಡಿಲ್ಲ..
ಬೇರೆ ರಾಜ್ಯದಿಂದ ಬೆಂಗಳೂರಿಗೆ ಕಲಬೆರಕೆ ಮಾಂಸ ಸಾಗಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಿ ಅಬ್ದುಲ್ ರಝಾಕ್‍ಗೆ ಯಾವುದೇ ನೋಟಿಸ್ ನೀಡಿಲ್ಲ. ಒಟ್ಟು 12 ಜನರಿಗೆ ಮಾಂಸ ಮಾರಾಟದ ಪರವಾನಗಿ ಕೊಟ್ಟಿದ್ದೇವೆ. ಅವರನ್ನು ಭೇಟಿ ನೀಡಿ ಮಾಹಿತಿ ನೀಡುವುದಕ್ಕೆ ಹೇಳಿದ್ದೇವೆ. ಒಂದು ವೇಳೆ ಎಲ್ಲರೂ ಹಾಜರಾಗದಿದ್ದರೆ ನೋಟಿಸ್ ನೀಡಲಾಗುವುದು ಮತ್ತು ಅವರ ಪರವಾನಗಿ ರದ್ದು ಮಾಡುತ್ತೇವೆ ಎಂದು ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
ಪ್ರತ್ಯೇಕವಾಗಿ 3 ಎಫ್‍ಐಆರ್ ದಾಖಲು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‍ಪೇಟೆ ಠಾಣೆಯಲ್ಲಿ ಪ್ರತ್ಯೇಕವಾಗಿ 3 ಎಫ್‍ಐಆರ್ ದಾಖಲಾಗಿದ್ದು, ಅಕ್ರಮವಾಗಿ ಮಾಂಸ ಮಾರಾಟದ ಬಗ್ಗೆ, ಗುಂಪುಗೂಡಿ ಗಲಾಟೆ ಮಾಡಿದ್ದ ಆರೊಪದಡಿ ಮತ್ತು ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಘಪರಿವಾರದ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಎಫ್‍ಐಆರ್ ಗಳು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.