ಬೆಂಗಳೂರು | ಏರ್ಪೋರ್ಟ್ನಲ್ಲಿ ನೈಜೀರಿಯಾ ಮಹಿಳೆಯ ಬಂಧನ : ಕೋಟ್ಯಂತರ ರೂ. ಮೌಲ್ಯದ ಕೊಕೇನ್ ಜಪ್ತಿ
ಸಾಂದರ್ಭಿಕ ಚಿತ್ರ(PC: Meta AI)
ಬೆಂಗಳೂರು : ಕೋಟ್ಯಂತರ ರೂ. ಮೌಲ್ಯದ ಕೊಕೇನ್ ಅನ್ನು ಗುಳಿಗೆಗಳ ರೂಪದಲ್ಲಿ ಹೊಟ್ಟೆಯಲ್ಲಿಟ್ಟುಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನೈಜೀರಿಯಾ ಮಹಿಳೆಯೊಬ್ಬರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ವಿಮಾನ ನಿಲ್ದಾಣದ ಕಂದಾಯ ನಿರ್ದೇಶನಾಲಯದ ವಿಚಕ್ಷಣಾ ದಳಕ್ಕೆ ಈ ಮಹಿಳೆ ಮಾದಕ ವಸ್ತುವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಇದರನ್ವಯ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳೆಯು ಜು.26ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೊಕೇನ್ ನನ್ನು ಕಳ್ಳ ಸಾಗಾಣೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾಳೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಮಹಿಳೆ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಡ್ರಗ್ಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಕೊಕೈನ್ ಗುಳಿಗೆಗಳನ್ನು ಹೊಟ್ಟೆಯಲ್ಲಿ ಅಡಗಿಸಿಕೊಂಡಿರುವುದು ಪತ್ತೆಯಾಗಿದೆ. ಒಂದು ಕೆ.ಜಿ. ತೂಕದ 57 ಗುಳಿಗೆಗಳನ್ನು ಆಕೆಯ ದೇಹದಿಂದ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿ ಮೂಲಗಳು ಮಾಹಿತಿ ನೀಡಿವೆ.