ಬೆಂಗಳೂರು | ಬಾರ್ ನಲ್ಲಿ ಮಾರಕಾಸ್ತ್ರಗಳಿಂದ ಬೆದರಿಕೆ ಆರೋಪ : ಇಬ್ಬರ ಬಂಧನ
ಬೆಂಗಳೂರು : ಬಾರ್ ಆ್ಯಂಡ್ ರೆಸ್ಟೋರೆಂಟ್‍ನಲ್ಲಿ ಮಾರಕಾಸ್ತ್ರ ಹಿಡಿದು ಕುಳಿತು, ಇತರೆ ಗ್ರಾಹಕರಿಗೆ ಭಯವನ್ನುಂಟು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಡಿ.ಜೆ. ಹಳ್ಳಿಯ ನಿವಾಸಿಗಳಾದ ಸೈಯದ್ ಸುಹೇಬ್(24) ಹಾಗೂ ಸೈಯದ್ ಮುಬಾರಕ್(23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 12ರಂದು ರಾತ್ರಿ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಮಾರಕಾಸ್ತ್ರಗಳ ಸಮೇತ ಬಂದಿದ್ದ ಆರೋಪಿಗಳು, ಇತರೆ ಗ್ರಾಹಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಬಾರ್ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಹೆಣ್ಣೂರು ಠಾಣೆಯ ಹೊಯ್ಸಳ ಸಿಬ್ಬಂದಿ ಪರಿಶೀಲಿಸಿದ್ದರು. ಈ ವೇಳೆ ಆರೋಪಿಗಳಿಬ್ಬರು ರೆಸ್ಟೋರೆಂಟ್‍ನ ಇತರೆ ಗ್ರಾಹಕರಲ್ಲಿ ಭಯವುಂಟಾಗುವಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಕುಳಿತಿರುವುದು ಕಂಡು ಬಂದಿತ್ತು.
ತಕ್ಷಣ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.