ಬೆಂಗಳೂರು | ಮಹಿಳಾ ಭದ್ರತಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಆರೋಪ: ಮೆಟ್ರೋ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ಮಹಿಳಾ ಭದ್ರತಾ ಸಿಬ್ಬಂದಿಗಳಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಅಶ್ಲೀಲ ಶಬ್ದಗಳಿಂದ ನಿಂದಿಸಿದ ಆರೋಪದಡಿ ಮೆಟ್ರೋ ಅಧಿಕಾರಿ ವಿರುದ್ಧ ಸುಬ್ರಮ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ರಾಜಾಜಿನಗರದ ಮೆಟ್ರೋ ನಿಲ್ದಾಣದ ಅಸಿಸ್ಟಂಟ್ ಸೆಕ್ಷನ್ ಅಧಿಕಾರಿ ಗಜೇಂದ್ರ ಪಿ. ಎಂಬುವರ ವಿರುದ್ಧ ಸುಬ್ರಮ್ಮಣ್ಯನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ನಿಲ್ದಾಣದ ಎಎಸ್ಓ ಗಜೇಂದ್ರ.ಪಿ ನಿಂದಿಸಿದ್ದಾರೆ. ಒತ್ತಾಯ ಪೂರ್ವಕವಾಗಿ ಮಹಿಳೆಯ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ವಿರೋಧ ವ್ಯಕ್ತಪಡಿಸಿದರೆ ಸುಳ್ಳು ಪ್ರಕರಣ ಹಾಕಿ ವರ್ಗಾವಣೆ ಮಾಡುತ್ತೇವೆ ಎಂದು ಬೆದರಿಸುತ್ತಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಮೆಟ್ರೋ ನಿಲ್ದಾಣದ ಇತರೆ ಮಹಿಳಾ ಭದ್ರತಾ ಸಿಬ್ಬಂದಿಗಳಿಗೆ ಅಶ್ಲೀಲ ಪದಗಳಿಂದ ನಿಂದಿಸುವುದಲ್ಲದೆ, ಮಹಿಳಾ ಸಿಬ್ಬಂದಿಗಳಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಲೈಂಗಿಕತೆಗೆ ಸಹಕರಿಸದ ಸಿಬ್ಬಂದಿಗಳಿಗೆ ಬೇರೆ ಕಡೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪವೂ ಮೆಟ್ರೋ ಅಧಿಕಾರಿ ಗಜೇಂದ್ರ ವಿರುದ್ಧ ಕೇಳಿಬಂದಿದ್ದು, ಈ ಕುರಿತು ಮಹಿಳಾ ಸಿಬ್ಬಂದಿಗಳು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.