ಬೆಂಗಳೂರು | ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ : 2.36 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ , ಓರ್ವ ಬಂಧನ
ಬೆಂಗಳೂರು : ಮಾದಕ ವಸ್ತು ಮಾರಾಟ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು ವಿದೇಶಿ ಪ್ರಜೆಯೊರ್ವನನ್ನು ಬಂಧಿಸಿ, 2.36 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೈಝಿರಿಯಾ ದೇಶದ ಬೋನಿ ಫೇಸ್(31) ಎಂಬಾತನನ್ನು ಬಂಧಿಸಿ 2.36 ಕೋಟಿ ಮೌಲ್ಯದ 1 ಕೆಜಿ 577 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಅ.24 ರಂದು ಇಲ್ಲಿನ ಪರಪ್ಪನ ಅಗ್ರಹಾರದ ಶ್ರೀನಿಧಿ ಲೇಔಟ್ಸ್, ದೊಡ್ಡನಾಗಮಂಗಲದ ಮನೆಯೊಂದರಲ್ಲಿ ವಾಸವಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ವಿದೇಶಿ ನೈಝಿರಿಯಾ ಪ್ರಜೆ 2020ನೆ ಸಾಲಿನಲ್ಲಿ ವೈದ್ಯಕೀಯ ವೀಸಾದಡಿಯಲ್ಲಿ ಭಾರತಕ್ಕೆ ಬಂದು ಹೊಸದಿಲ್ಲಿ ಬಳಿಯ ಗ್ರೇಟರ್ ನೋಯ್ಡಾದಲ್ಲಿ ವಾಸವಾಗಿ ಕ್ಷೌರಿಕ ಕೆಲಸ ಮಾಡಿಕೊಂಡಿದ್ದ.ಈ ಆರೋಪಿಗೆ, ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಓರ್ವ ವಿದೇಶಿ ಮೂಲದ ಮಹಿಳಾ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕವಿದ್ದು, ಆಕೆ ಸಹಾಯದಿಂದ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಯ ಜೊತೆ ಮಾದಕವಸ್ತುಗಳ ಮಾರಾಟ ದಂಧೆಯಲ್ಲಿದ್ದ ಮಹಿಳಾ ಡ್ರಗ್ಸ್ ಪೆಡ್ಲರ್ ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಇನ್ನೂ, ಆರೋಪಿ ಬಂಧನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ನಗದು ಬಹುಮಾನ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.