ಬೆಂಗಳೂರು | ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ವಿದೇಶಿ ಪ್ರಜೆ ಬಂಧನ : ಮಾಲು ವಶ
ಸಾಂದರ್ಭಿಕ ಚಿತ್ರ
ಬೆಂಗಳೂರು : ನಗರದಲ್ಲಿ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಸಿಕ್ಕ ಮಾಹಿತಿ ಮೇರೆಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ತಂಡವು ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ವೆಸ್ಟ್ ಆಫ್ರಿಕಾದ ಐವರಿ ಕೋಸ್ಟ್ ನ 33 ವರ್ಷದ ಸೆಕಾ ಘಿಸ್ಲೇನ್ ತಾನೊ ಎಂಬಾತನನ್ನು ಬೊಮ್ಮನಹಳ್ಳಿಯಲ್ಲಿ ಬಂಧಿಸಲಾಗಿದೆ ಎಂದು ಬಿ.ದಯಾನಂದ್ ಹೇಳಿದ್ದಾರೆ.
ಸೆಕಾ ಘಿಸ್ಲೇನ್ ಬಳಿಯಿದ್ದ ಮೊಬೈಲ್ ಫೋನ್ ಮತ್ತು ತೂಕದ ಯಂತ್ರದೊಂದಿಗೆ ಬಿಳಿ, ಕಂದು, ಹಳದಿ ಮತ್ತು ಗುಲಾಬಿ ಸೇರಿದಂತೆ ಎರಡು ಕೆ.ಜಿ. ಎಂಡಿಎಂಎ (ಮೆಥಿಲೀನ್ ಡಿಯೋಕ್ಸಿ ಮೆಥಾಂಫೆಟಮೈನ್) ಅನ್ನು ವಶಪಡಿಸಿಕೊಳ್ಳಲಾಗಿದೆ.
2022ರಲ್ಲಿ ವ್ಯಾಪಾರ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಸೆಕಾ ಘಿಸ್ಲೇನ್ ನಂತರ ಮುಂಬೈ ಮತ್ತು ಹೊಸದಿಲ್ಲಿಯಲ್ಲಿ ಗಾರ್ಮೆಂಟ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಸುಳ್ಳು ಹೇಳಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ.
ಸೆಕಾ ಘಿಸ್ಲೇನ್ ವಿರುದ್ಧ 2022ರಲ್ಲಿ ಶಂಕರಪುರ ಪೊಲೀಸ್ ಠಾಣೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್(ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 2023ರ ಅಕ್ಟೋಬರ್ ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದನು. ಆದರೆ ಬಿಡುಗಡೆ ಆದ ನಂತರವೂ ಅದೇ ಅಕ್ರಮ ದಂಧೆ ಮುಂದುವರಿಸಿದ್ದನು. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.