ಬೆಂಗಳೂರು | ಡಿಟರ್ಜೆಂಟ್ ಪೌಡರ್ ನಕಲು ತಯಾರಿಕೆ ಅಡ್ಡೆ ಮೇಲೆ ದಾಳಿ: ಆರೋಪಿ ವಶಕ್ಕೆ
ಬೆಂಗಳೂರು: ಪ್ರತಿಷ್ಠಿತ ಬ್ರ್ಯಾಂಡ್ ಗಳ ಡಿಟರ್ಜೆಂಟ್ ಪೌಡರ್ ಉತ್ಪನ್ನಗಳ ನಕಲು ತಯಾರಿಸಿ, ಮಾರಾಟ ಮಾಡುತ್ತಿದ್ದ ಘಟಕದ ಮೇಲೆ ಇಲ್ಲಿನ ಮಲ್ಲೇಶ್ವರಂ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಹಿಂದೂಸ್ತಾನ್ ಯೂನಿಲಿವರ್ ಕಂಪೆನಿಯ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದ್ದು, ಮಾಲಕ ಅರ್ಜುನ್ ಜೈನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಬ್ರ್ಯಾಂಡ್ ನ ಡಿಟರ್ಜೆಂಟ್ ಪ್ಯಾಕೆಟ್ ಗಳನ್ನು ಮಲ್ಲೇಶ್ವರಂನ ವಿವಿಧ ಅಂಗಡಿಗಳಿಗೆ ಪೂರೈಸುವ ಕೆಲಸದಲ್ಲಿ ನಿರತರಾಗಿದ್ದಾಗಲೇ ಆರೋಪಿಯ ಕಡೆಯವರನ್ನು ವಶಕ್ಕೆ ಪಡೆದು, ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಳಿಕ ಮಾದನಾಯಕನಹಳ್ಳಿ ಬಳಿ ನಡೆಯುತ್ತಿದ್ದ ತಯಾರಿಕಾ ಕಾರ್ಖಾನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ ಸುಮಾರು 20 ಲಕ್ಷ ರೂ. ಮೌಲ್ಯದ ಡಿ ಡಿಟರ್ಜೆಂಟ್ ವಸ್ತುಗಳು, ವಿವಿಧ ಕಂಪೆನಿಯ ಲೇಬಲ್ ಗಳು ಹಾಗೂ ಸುಮಾರು ಮಿಕ್ಸಿಂಗ್ ಮಷಿನ್ ಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.