ಬೆಂಗಳೂರು | ಸ್ಪಾ ಮೇಲೆ ದಾಳಿ : 7 ಯುವತಿಯರ ರಕ್ಷಣೆ, ಓರ್ವ ಬಂಧನ
ಬೆಂಗಳೂರು : ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸ್ಪಾ ಮೇಲೆ ಇಲ್ಲಿನ ಇಂದಿರಾ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ವಿದೇಶಿ ಹಾಗೂ ಹೊರ ರಾಜ್ಯದವರು ಸೇರಿ ಏಳು ಯುವತಿಯರನ್ನು ರಕ್ಷಿಸಿ ಒಬ್ಬನನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಇಲ್ಲಿನ 12ನೇ ಮುಖ್ಯ ರಸ್ತೆಯಲ್ಲಿರುವ ಸ್ಪಾವೊಂದರಲ್ಲಿ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಸ್ಪಾ ಮೇಲೆ ದಾಳಿ ನಡೆಸಿ, ವಿದೇಶಿ ಮತ್ತು ಹೊರ ರಾಜ್ಯಗಳ ಒಟ್ಟು 7 ಜನ ಸಂತ್ರಸ್ತ ಯುವತಿಯರನ್ನು ರಕ್ಷಿಸಿದ್ದು, ಓರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಪಾನಲ್ಲಿ ಕ್ರಾಸ್ ಮಸಾಜ್, ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್ ಎಂಬಿತ್ಯಾದಿ ಹೆಸರಿನ ಮಸಾಜ್ಗಳನ್ನು ಮಾಡುವುದಾಗಿ ಗ್ರಾಹಕರನ್ನು ಆಕರ್ಷಿಸಿ, ಯುವತಿಯರಿಂದ ಬಲವಂತವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಏಳು ಮಂದಿ ಸಂತ್ರಸ್ತ ಯುವತಿಯರನ್ನು ರಕ್ಷಿಸಿ ಅವರ ಕುಟುಂಬಸ್ಥರಿಗೆ ಒಪ್ಪಿಸಲಾಗಿದ್ದು, ಸ್ಪಾನ ಮಾಲಕರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.