ಬೆಂಗಳೂರು | ಸೈಬರ್ ವಂಚನೆಗೆ ಭಾರತೀಯ ಸಿಮ್ ಖರೀದಿಸಿ ವಿದೇಶಕ್ಕೆ ರವಾನೆ : ಆರೋಪಿ ಬಂಧನ
ಬೆಂಗಳೂರು : ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಉದ್ದೇಶಕ್ಕಾಗಿ ಭಾರತೀಯ ಸಿಮ್‍ಗಳನ್ನು ಖರೀದಿ ಮಾಡಿ ಕಾನೂನು ಬಾಹಿರವಾಗಿ ವಿದೇಶಕ್ಕೆ ರವಾನೆ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನಾರಾ ಶ್ರೀನಿವಾಸ್ ರಾವ್ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವನು. ಬಂಧಿತ ಆರೋಪಿಯು ಭಾರತದ ಸಿಮ್‍ಗಳನ್ನು ಖರೀದಿ ಮಾಡಿ ಅಂತಾರಾಷ್ಟ್ರೀಯ ಕೊರಿಯರ್ ಸಂಸ್ಥೆಗಳ ಮೂಲಕ ಅಕ್ರಮವಾಗಿ ವಿದೇಶಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದನು ಎನ್ನಲಾಗಿದೆ.
ಈ ವೇಳೆ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಿಮ್‍ಗಳು ಪತ್ತೆಯಾಗಿದೆ. ಒಂದು ಪಾರ್ಸಲ್‍ನಲ್ಲಿ 24, ಮತ್ತೊಂದರಲ್ಲಿ 114 ಸಿಮ್ ಕಾರ್ಡ್‍ಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಚೆನ್ನೈನ ಸೈಯದ್ ಎಂಬಾತನಿಗೆ ಸೇರಿದ ಕೊರಿಯರ್ ಕಂಪೆನಿ ಮೂಲಕ ಪಾರ್ಸಲ್ ಬುಕ್ ಆಗಿತ್ತು ಎಂದು ತಿಳಿದುಬಂದಿದೆ.
ಈ ಪ್ರಕರಣ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರಸಂಪರ್ಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.