ಬೆಂಗಳೂರು | ಅಕ್ಕನ ಮನೆಯಲ್ಲಿ ನಗದು, ಚಿನ್ನಾಭರಣ ಕಳವು ; ತಂಗಿಯ ಬಂಧನ
ಬೆಂಗಳೂರು: ತನ್ನ ಅಕ್ಕನ ಮನೆಯಲ್ಲಿ ಲಕ್ಷಾಂತರ ರೂ.ಬೆಲೆಬಾಳುವ ಹಣ, ಚಿನ್ನಾಭರಣ ದೋಚಿದ್ದ ಪ್ರಕರಣದಡಿ ತಂಗಿಯನ್ನು ಇಲ್ಲಿನ ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದು, 51.90 ಲಕ್ಷ ರೂ. ನಗದು ಹಾಗೂ 46 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ನಾಗದೇವನಹಳ್ಳಿಯ ಆರ್.ಆರ್.ಲೇಔಟ್‍ನಲ್ಲಿ ವಾಸವಾಗಿದ್ದ ಕುನ್ನೇಗೌಡ ಎಂಬವರು ನೀಡಿದ ದೂರಿನ ಮೇರೆಗೆ ನಾದಿನಿ ಉಮಾ (22) ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರುದಾರ ಕುನ್ನೇಗೌಡ ಅವರು ಸಿಮೆಂಟ್ ಹಾಗೂ ಕಬ್ಬಿಣದ ವ್ಯಾಪಾರ ಮಾಡಿಕೊಂಡಿರುತ್ತಾರೆ. ಇವರೊಂದಿಗೆ ಅವರ ಸಂಬಂಧಿಕರೊಬ್ಬರು ಈ ವ್ಯಾಪಾರದಲ್ಲಿ ಪಾಲುದಾರರಾಗಿರುತ್ತಾರೆ. ಎ.22ರಂದು ಇವರು ಕುಟುಂಬ ಸಮೇತರಾಗಿ ಅವರ ಸ್ವಂತ ಊರಿನಲ್ಲಿ ನಡೆಯುವ ಶ್ರೀ ಚೌಡೇಶ್ವರಿ ದೇವರ ಹಬ್ಬದ ಪ್ರಯುಕ್ತ ಊರಿಗೆ ಹೋಗಿದ್ದರು.
ಊರಿಗೆ ಹೋಗುವ ಮುನ್ನಾ ಅವರ ಸಂಬಂಧಿಗೆ ಮನೆಯ ಕೀಯನ್ನು ಕೊಟ್ಟು ರಾತ್ರಿ ಮಲಗಲು ತಿಳಿಸಿದ್ದರು. ಎ.24ರಂದು ರಾತ್ರಿ ಸುಮಾರು 10.30ರ ಸಮಯದಲ್ಲಿ ಇವರ ಮನೆಯಲ್ಲಿ ಮಲಗಲು ಅವರ ಸಂಬಂಧಿಯು ಹೋದಾಗ, ಮನೆಯಲ್ಲಿ ಬೀರುವಿನ ಬಾಗಿಲುಗಳು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿ ಕಳ್ಳತನವಾಗಿರುವ ಬಗ್ಗೆ ಅರಿತು ಕೂಡಲೆ ಫೋನ್ ಕರೆ ಮಾಡಿ ಮನೆ ಮಾಲಕರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಊರಿನಿಂದ ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ 65 ಲಕ್ಷ ಬೆಲೆಬಾಳುವ ಚಿನ್ನದ ನಾಣ್ಯ ಹಾಗೂ ನಗದು ಕಳುವಾಗಿರುತ್ತದೆಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಂಬಂಧಿಕರನ್ನು ವಿಚಾರಿಸಿದಾಗ ಮನೆ ಮಾಲಕರ ಪತ್ನಿಯ ತಂಗಿಯೇ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸಹೋದರಿ ಉಮಾ ತನ್ನಲ್ಲಿದ್ದ ನಕಲಿ ಕೀ ಬಳಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನದ ನಾಣ್ಯಗಳು ಹಾಗೂ ಮಂಚದ ಕೆಳಗೆ ಇಟ್ಟಿದ್ದ 51.90 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿರುವುದಾಗಿ ತಪದಪೊಪ್ಪಿಕೊಂಡಿದ್ದಾಳೆ.
ಆರೋಪಿಯಿಂದ ಐದು ಲಕ್ಷ ರೂ. ನಗದು ಹಾಗೂ 30 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡರೆ, ಇನ್ನುಳಿದ 16 ಚಿನ್ನದ ನಾಣ್ಯ ಹಾಗೂ 46.90 ಲಕ್ಷ ರೂ. ಹಣವನ್ನು ಆಕೆ ಕೆಲಸ ಮಾಡುವ ಆಟೋ ಕನ್ಸಲ್ ಟೆಂಟ್ ಮಾಲಕರಿಂದ ವಶಕ್ಕೆ ಪಡೆದುಕೊಂಡು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.