ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಆಸ್ತಿ ಮೌಲ್ಯ 75.92ಕೋಟಿ ರೂ.
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮನ್ಸೂರ್ ಅಲಿಖಾನ್ ಒಟ್ಟು 75.92 ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದಾರೆ.
2022-23ನೆ ಸಾಲಿನಲ್ಲಿ ಮನ್ಸೂರ್ ಅಲಿಖಾನ್ ಆದಾಯ 2.63 ಕೋಟಿ ರೂ.ಗಳಾದರೆ, ಅವರ ಪತ್ನಿ ತಸ್ಬಿಯಾ ಖಾನ್ ಅವರ ಆದಾಯ 4.83 ಕೋಟಿ ರೂ.ಗಳು. ಮನ್ಸೂರ್ ಬಳಿ 4.50 ಲಕ್ಷ ರೂ.ನಗದು ಇದ್ದು, ಅವರ ಪತ್ನಿ ಬಳಿ 4 ಲಕ್ಷ ರೂ., ಮೊದಲ ಮಗ ಮುಹಮ್ಮದ್ ಅಯಾನ್ ಖಾನ್ ಬಳಿ 1 ಲಕ್ಷ ರೂ. ಹಾಗೂ ಎರಡನೆ ಮಗ ಮುಹಮ್ಮದ್ ಅರ್ಹಾನ್ ಖಾನ್ ಬಳಿ 50 ಸಾವಿರ ರೂ.ನಗದು ಇದೆ.
ಸಾರ್ವಜನಿಕ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸಿಕಂದರಾಬಾದ್‍ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಒಂದು ಎಫ್‍ಐಆರ್ ದಾಖಲಾಗಿದ್ದು, ಪ್ರಕರಣವ 22ನೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಪೀಠದ ಎದುರು ಇದೆ.
ಮನ್ಸೂರ್ ಅಲಿಖಾನ್ 14.86 ಕೋಟಿ ರೂ. ಚರಾಸ್ತಿ ಹಾಗೂ 61.06 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 10.34 ಕೋಟಿ ರೂ., ಮೊದಲ ಮಗನ ಹೆಸರಿನಲ್ಲಿ 21.93 ಲಕ್ಷ ರೂ., ಎರಡನೆ ಮಗನ ಹೆಸರಿನಲ್ಲಿ 21.38 ಲಕ್ಷ ರೂ.ಗಳ ಚರಾಸ್ತಿಯಿದೆ.
ಮನ್ಸೂರ್ ಅಲಿಖಾನ್‍ಗೆ 1.01 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಅನುವಂಶಿಕವಾಗಿ ಬಂದಿದೆ. ವಿವಿಧ ಬ್ಯಾಂಕುಗಳು ಹಾಗೂ ವ್ಯಕ್ತಿಗಳಿಂದ 6.84 ಕೋಟಿ ರೂ.ಸಾಲವನ್ನು ಪಡೆದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 2.19 ಕೋಟಿ ರೂ.ಸಾಲ ಇದೆ. ಮನ್ಸೂರ್ ಅಲಿಖಾನ್ ಬಳಿ 98.18 ಲಕ್ಷ ರೂ.ಮೌಲ್ಯದ ಆಡಿ ಎಸ್5 ಸ್ಟೋರ್ಟ್‍ಬ್ಯಾಕ್ ಕಾರಿದೆ. ಅವರ ಪತ್ನಿ ಬಳಿ 1.07 ಕೋಟಿ ರೂ.ಮೌಲ್ಯದ ಬಿಎಂಡಬ್ಲ್ಯು ಎಕ್ಸ್ 7 ಕಾರಿದೆ.
1.38 ಕೋಟಿ ರೂ.ಮೌಲ್ಯದ 2257.01 ಗ್ರಾಂ ಚಿನ್ನವನ್ನು ಮನ್ಸೂರ್ ಅಲಿಖಾನ್ ಹೊಂದಿದ್ದಾರೆ. ಅವರ ಪತ್ನಿ ಬಳಿ 2.27 ಕೋಟಿ ರೂ.ಮೌಲ್ಯದ 3717.70 ಗ್ರಾಂ ಚಿನ್ನವನ್ನು ಹೊಂದಿದ್ದಾರೆ.