ಬೆಂಗಳೂರು| ಅಡುಗೆ ಅನಿಲ ಸ್ಫೋಟ: ನಾಲ್ವರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
ಬೆಂಗಳೂರು : ಅಡುಗೆ ಅನಿಲ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಡಿಜೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಿಜೆ ಹಳ್ಳಿಯ 3ನೇ ಕ್ರಾಸ್ನಲ್ಲಿರುವ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಸೀರ್ ಪಾಶಾ, ಬಾನು, 7 ವರ್ಷದ ಮಗ ಹಾಗೂ 5 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜೀವನೋಪಾಯಕ್ಕಾಗಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ನಾಸೀರ್, ಶನಿವಾರ ಬೆಳಗ್ಗೆ ಮನೆಯ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಆನ್ ಮಾಡಿಟ್ಟಿದ್ದರು. ಈ ವೇಳೆ ಅಡುಗೆ ಅನಿಲ ವಾಸನೆ ಬಂದಿದ್ದು, ರೆಗ್ಯೂಲೇಟರ್ ತೆಗೆದು ಮನೆಯಿಂದ ಪತ್ನಿ ಮಕ್ಕಳನ್ನು ದೂರ ಕಳಿಸಲು ಮುಂದಾಗಿದ್ದ ವೇಳೆಯೇ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಮನೆಯ ಮೇಲ್ಛಾವಣಿ ಜಖಂಗೊಂಡಿದೆ.
ಸ್ಫೋಟದಿಂದ ಅಕ್ಕಪಕ್ಕದಲ್ಲಿದ್ದ ಕೆಲ ಮನೆಗಳಿಗೂ ಹಾನಿಯಾಗಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ. ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.