ಬೆಂಗಳೂರು | ಫ್ಯಾಷನ್ ಬ್ರ್ಯಾಂಡ್ ಕಂಪೆನಿಯ ಉತ್ಪನ್ನಗಳ ನಕಲು : 1.38 ಕೋಟಿ ರೂ.ಮೌಲ್ಯದ ಬಟ್ಟೆ ಜಪ್ತಿ
ಬೆಂಗಳೂರು : ಪ್ರತಿಷ್ಠಿತ ಫ್ಯಾಷನ್ ಬ್ರ್ಯಾಂಡ್ ಕಂಪೆನಿಗಳ ಬಟ್ಟೆಗಳ ನಕಲು ದಾಸ್ತಾನು ಮಾಡಿಕೊಂಡು ಅಸಲಿಯೆಂದು ಮಾರಾಟ ಮಾಡುತ್ತಿದ್ದ ಪ್ರಕರಣದಡಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಆತನ ಅಂಗಡಿಯಲ್ಲಿದ್ದ 1.38 ಕೋಟಿ ರೂ.ಮೌಲ್ಯದ ನಕಲಿ ಬಟ್ಟೆಗಳನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದ್ದಾರೆ.
ನರಸಿಂಹರಾಜು(38) ಎಂಬಾತ ಬಂಧಿತ ಆರೋಪಿಯಾಗಿದ್ದು, ಆರೋಪಿಯ ಕೃತ್ಯದ ಕುರಿತು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು, ಆತನ ಅಂಗಡಿ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಂಎಲ್ ಲೇಔಟ್‍ನಲ್ಲಿ ಅಂಗಡಿ ಹೊಂದಿದ್ದ ಆರೋಪಿ, ನೈಕಿ, ಪೂಮಾ, ಟಾಮಿ ಹಿಲ್ಫಿಗರ್, ಅಂಡರ್ ಆರ್ಮರ್, ಜಾರಾ ಮತ್ತಿತರ ಬ್ರ್ಯಾಂಡ್‍ಗಳ ನಕಲಿ ಬಟ್ಟೆಗಳನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದ. ಅವುಗಳನ್ನೇ ಅಸಲಿ ಬಟ್ಟೆಗಳೆಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕಾಪಿರೈಟ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.