ಬೆಂಗಳೂರು | ಸೆರಲ್ಯಾಕ್ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಇಟ್ಟು ಸಾಗಾಟ : ವಿದೇಶಿ ಪ್ರಜೆಯ ಬಂಧನ
ಸಾಂದರ್ಭಿಕ ಚಿತ್ರ (PC : Meta AI)
ಬೆಂಗಳೂರು : ಮಕ್ಕಳು ಸೇವಿಸುವ ಸೆರಲ್ಯಾಕ್ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಇಟ್ಟು ಮುಂಬೈನಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಪ್ರಕರಣದಡಿ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನೈಜೀರಿಯಾ ಮೂಲದ ಚುಕುದ್ದೀನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 6 ಕೋಟಿ ರೂ. ಮೌಲ್ಯದ 4 ಕೆ.ಜಿ. ಮೌಲ್ಯದ ಎಂಡಿಎಂ ಕ್ರಿಸ್ಟೆಲ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈತ ವ್ಯವಹಾರದ ವೀಸಾದಡಿ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಬೆಂಗಳೂರಿಗೆ ಬಂದು ತನ್ನ ಸಹಚರರೊಂದಿಗೆ ನೆಲೆಸಿದ್ದ ಎನ್ನಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿದ್ದ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡ ದಾರಿ ಹಿಡಿದಿದ್ದ. ಸ್ನೇಹಿತರಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ. ತದನಂತರ ಮುಂಬೈನಲ್ಲಿರುವ ಸ್ನೇಹಿತರ ಮೂಲಕ ಸೆರಲ್ಯಾಕ್ ಸೇರಿದಂತೆ ವಿವಿಧ ಪ್ಯಾಕೆಟ್ಗಳಲ್ಲಿ ಎಂಡಿಎಂಎ ಇಟ್ಟು ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ ನಗರದಲ್ಲಿ ಒಂದು ಗ್ರಾಂಗೆ 10 ರಿಂದ 15 ಸಾವಿರದವರೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.