ಬೆಂಗಳೂರು | ಗ್ಯಾರೇಜ್ನಲ್ಲಿ ಅಗ್ನಿ ಅವಘಡ: ನಾಲ್ವರಿಗೆ ಗಾಯ, ವಾಹನಗಳಿಗೆ ಹಾನಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಲ್ಲಿನ ಬಸವೇಶ್ವರನಗರದ ಗ್ಯಾರೇಜ್ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ನಾಲ್ವರು ಗಾಯಗೊಂಡು, ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಪೂರ್ಣ ಹಾನಿಯಾಗಿರುವ ಘಟನೆ ಶನಿವಾರ ಸಂಜೆ ವರದಿಯಾಗಿದೆ.
ಘಟನೆಯಲ್ಲಿ ಗ್ಯಾರೇಜ್ ಮಾಲಕ ಜಾರ್ಜ್, ಕೆಲಸಗಾರ ಶಿವು ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಮಾತನಾಡಿದ ಅವರು, ಗ್ಯಾರೇಜ್ನಲ್ಲಿ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಗ್ಯಾರೇಜ್ ಮಾಲಕ ಹಾಗೂ ಕೆಲಸಗಾರ ಹಾಗೂ ಇಬ್ಬರು ಸಾರ್ವಜನಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟದ ತೀವ್ರತೆಗೆ ಗ್ಯಾರೇಜ್ ಸುತ್ತಮುತ್ತ ಇರುವ ಮನೆಗಳ ಗ್ಲಾಸ್ಗಳು ಜಖಂ ಆಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದರು.