ಬೆಂಗಳೂರು| ಸಚಿವರು, ಸಂಸದರ ಆಪ್ತನ ಸೋಗಿನಲ್ಲಿ ವಂಚನೆ: ಆರೋಪಿ ಸೆರೆ
ಬೆಂಗಳೂರು: ಕೇಂದ್ರ ಸಚಿವರು, ಸಂಸದರುಗಳ ಹೆಸರು ದುರ್ಬಳಕೆ ಮಾಡಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಆರೋಪಿಯನ್ನು ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸಂತೋಷ್ ಯಾನೆ ಸಂತೋಷ್ ರಾವ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಿಇ ವ್ಯಾಸಂಗ ಮಾಡಿರುವ ಈತ, ತನಗೆ ರಾಜ್ಯ ಹಾಗೂ ಕೇಂದ್ರದ ಮಂತ್ರಿಗಳು ಪರಿಚಯ ಇದೆ ಎಂದು ಉದ್ಯಮಿಗಳು, ಸಾರ್ವಜನಿಕರರೊಂದಿಗೆ ಹೇಳುತ್ತಿದ್ದ. ಬಳಿಕ ತನ್ನ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ, ಸಚಿವರು, ಸಂಸದರ ಕಚೇರಿಯ ಸೋಗಿನಲ್ಲಿ ತಾನೇ ಉದ್ಯಮಿಗಳಿಗೆ ನಕಲಿ ಕರೆ ಮಾಡುತ್ತಿದ್ದ.
ಇದನ್ನು ನಂಬುತ್ತಿದ್ದ ಉದ್ಯಮಿಗಳು ಸಂತೋಷ್ ಜೊತೆ ಉದ್ಯಮ ನಡೆಸಲು ಉತ್ಸುಕರಾಗಿ ಆತನ ಕಂಪೆನಿಗೆ ಹಣ ಹೂಡಿಕೆ ಮಾಡುತ್ತಿದ್ದರು. ಆದರೆ ಕಂಪೆನಿಯ ಖಾತೆಯಿಂದ ತನ್ನ ವೈಯಕ್ತಿಕ ಖಾತೆಗೆ ಹಣ ವರ್ಗಾಯಿಸಿಕೊಂಡು ಆರೋಪಿ ವಂಚಿಸುತ್ತಿದ್ದನು. ಅಷ್ಟೇ ಅಲ್ಲದೆ ಮಠ, ದೇವಸ್ಥಾನಗಳಲ್ಲೂ ಇದೇ ರೀತಿ ಹೇಳಿಕೊಂಡಿರುವ ಈತ, ಅನೇಕ ಕಡೆಗಳಲ್ಲಿ ವೇದಿಕೆಗಳಲ್ಲಿ ಸನ್ಮಾನವನ್ನೂ ಸಹ ಸ್ವೀಕರಿಸಿದ್ದಾನೆ. ವಂಚನೆಗೊಳಗಾದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.