ಬೆಂಗಳೂರು | ಪತ್ನಿ ಓಡಿ ಹೋಗಲು ಸಹಾಯ ಮಾಡಿದನೆಂದು ಸ್ನೇಹಿತನ ಕೊಲೆ: ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ತನ್ನ ಪತ್ನಿ ಪರಪುರುಷನ ಜತೆ ಓಡಿ ಹೋಗಲು ಸಹಾಯ ಮಾಡಿದ ಎಂಬ ಕಾರಣಕ್ಕೆ ಸ್ನೇಹಿತನನ್ನು ಕೊಲೆಗೈದ ಆರೋಪಿಗಳನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಹೇಮಂತ್ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದು, ಬಾಗಲಗುಂಟೆ ನಿವಾಸಿಗಳಾದ ಕಿರಣ್(32) ಮತ್ತು ಆತನ ಸ್ನೇಹಿತ ಅಕ್ಷಯ್(31) ಎಂಬವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್ಗಳ ಮಾರಾಟಗಾರನಾಗಿದ್ದನು. ಈತನಿಗೆ ಕೆಂಗೇರಿಯ ಹೇಮಂತ್ನ ಪರಿಚಯವಿತ್ತು. ಕಿರಣ್ನ ಹೆಂಡತಿ ಮರಿಸ್ವಾಮಿ ಎಂಬವರ ಜತೆಗೆ ಓಡಿ ಹೋಗಿದ್ದಳು ಎನ್ನಲಾಗಿದೆ.
ಹೇಮಂತ್ ಆಗಾಗ ಕೆಂಗೇರಿಯಿಂದ ಬಾಗಲಗುಂಟೆಗೆ ಕಿರಣ್ ಮತ್ತು ಅಕ್ಷಯ್ ಅವರನ್ನು ಭೇಟಿಯಾಗಲು ಬರುತ್ತಿದ್ದರು. ಕೆಂಗೇರಿಯಲ್ಲಿ ಹೇಮಂತ್ ಇದ್ದ ರೆಸ್ಟೋರೆಂಟ್ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮರಿಸ್ವಾಮಿ, ಕಿರಣ್ ಮನೆಗೆ ಬಂದಾಗಲೆಲ್ಲ ಹೇಮಂತ್ ಜೊತೆ ಬರುತ್ತಿದ್ದ. ಮರಿಸ್ವಾಮಿ ಎರಡು ತಿಂಗಳಿನಿಂದ ಕಿರಣ್ ಪತ್ನಿಗೆ ಹತ್ತಿರವಾಗಿದ್ದರು.
ಈ ಮರಿಸ್ವಾಮಿಗೆ ಹೇಮಂತ್ ಸ್ನೇಹಿತನಾಗಿದ್ದ. ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದ ತನ್ನ ಪತ್ನಿಯನ್ನು ಕಿರಣ್ ಹುಡುಕುತ್ತಿದ್ದಾಗ ಹೇಮಂತ್ ಕರೆ ಮಾಡಿ ‘ನಿನ್ನ ಹೆಂಡತಿ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಾಳೆ’ ಎಂದು ಹೇಳಿದ್ದನು.
ತನ್ನ ಹೆಂಡತಿ ಓಡಿ ಹೋಗಲು ಹೇಮಂತ್ ಸಹಾಯ ಮಾಡಿದ್ದಾನೆ ಎಂದು ಅನುಮಾನಗೊಂಡ ಆರೋಪಿ ಕಿರಣ್, ಅಕ್ಷಯ್ ಜತೆ ಸೇರಿಕೊಂಡು ಫೆಬ್ರವರಿ 4ರಂದು ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿಗೆ ತೆರಳಿ ಹೇಮಂತ್ಗೆ ಕರೆ ಮಾಡಿ ತಮ್ಮ ಬಳಿಗೆ ಕರೆಸಿಕೊಂಡಿದ್ದರು.
ನಂತರ ಹೇಮಂತ್ನನ್ನು ಕರೆದುಕೊಂಡು ಬಾರ್ ನಲ್ಲಿ ಮದ್ಯ ಸೇವಿಸಿ, ನಂತರ ಬಾಗಲಗುಂಟೆಯ ಪಾಪಣ್ಣ ಲೇಔಟ್ಗೆ ಹೇಮಂತ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹೇಮಂತ್ಗೆ ದೊಣ್ಣೆ ಹಾಗೂ ಕಬ್ಬಿಣದ ವಸ್ತುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಗಾಯಗೊಂಡ ಹೇಮಂತ್ನನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಫೆ.5ರ ರಾತ್ರಿ ಹೇಮಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.