ಬೆಂಗಳೂರು | ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ : ಇಬ್ಬರು ವಶಕ್ಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಡಿ ಇಬ್ಬರು ಮಹಿಳಾ ಪ್ರಯಾಣಿಕರನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, 6 ಕೋಟಿ ರೂ. ಮೌಲ್ಯದ 9 ಕೆ.ಜಿ.ಗೂ ಅಧಿಕ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಬಂಧಿತ ಇಬ್ಬರು ಮಹಿಳೆಯರು ಪಶ್ಚಿಮ ಬಂಗಾಳ ಹಾಗೂ ಹರಿಯಾಣ ಮೂಲದವರೆಂದು ತಿಳಿದುಬಂದಿದೆ. ಜೂ.4ರಂದು ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದ ಥಾಯ್ ಏರ್ವೇಸ್ ವಿಮಾನದಲ್ಲಿ ಚಿನ್ನ ಕಳ್ಳಸಾಗಣಿಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ದೊರಕಿತ್ತು.
ಈ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ಹ್ಯಾಂಡ್ ಬ್ಯಾಗ್ನಲ್ಲಿ ಗಟ್ಟಿ ಹಾಗೂ ಕಚ್ಚಾ ರೂಪದಲ್ಲಿ 6.8 ಕೆ.ಜಿ. ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ ಹ್ಯಾಂಡ್ಬ್ಯಾಗ್ನಲ್ಲಿ ಸಿಕ್ಕ ದಾಖಲೆಯ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ 4.77 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅದೇ ದಿನ ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ಮತ್ತೊಂದು ವಿಮಾನದಲ್ಲಿ ತಪಾಸಣೆ ನಡೆಸಿದಾಗ ಗಟ್ಟಿ ರೂಪದ 2.18 ಕೆ.ಜಿ. ಚಿನ್ನ ಲಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.