ಬೆಂಗಳೂರು | ಮನೆಗಳ್ಳತನ, ಸರಗಳ್ಳತ ಮಾಡುತ್ತಿದ್ದ ಪ್ರಕರಣ : ಬಾಲಕ ಸೇರಿ ಐವರ ಬಂಧನ
ಬೆಂಗಳೂರು ಗ್ರಾಮಾಂತರ : ಮನೆಗಳ್ಳತನ, ಸರಗಳ್ಳತ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಡಿ ಓರ್ವ ಬಾಲಕ ಸೇರಿ ಐವರನ್ನು ಇಲ್ಲಿನ ನೆಲಮಂಗಲ ಟೌನ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಅಶೋಕ್, ವಿನೋದ್, ಶಿವಕುಮಾರ್ ಹಾಗೂ ಸಂತೋಷ್ ಸೇರಿ ಐವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಟಿವಿ ಹಾಗೂ ಲ್ಯಾಪ್‍ಟಾಪ್ ಜೊತೆಗೆ ಎರಡು ಬೈಕ್‍ಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳ್ಳತನ ಪ್ರಕರಣ ಸಂಬಂಧ ಆರೋಪಿಗಳಾದ ಅಶೋಕ್ ಮತ್ತು ವಿನೋದ್ ಎಂಬ ಅಣ್ಣ ತಮ್ಮಂದಿರನ್ನು ಬಂಧಿಸಲಾಗಿದೆ.
ಇವರಿಂದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನಕ್ಕೆ ಸಂಬಂಧಿಸಿದ ಸರ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಈ ಹಿಂದೆ ಕೂಡ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಜೈಲಿಗೆ ಹೋಗಿ ಬಂದಿದ್ದರೂ ಸರಗಳ್ಳತನ, ಮನೆಗಳ್ಳತನ ಮುಂದುವರೆಸಿದ್ದರು ಎಂದು ಹೇಳಿದ್ದಾರೆ.
ಮೋಜು-ಮಸ್ತಿಯ ಜೀವನಕ್ಕಾಗಿ ಹಾಗೂ ಮಾಡಿದ ಸಾಲ ತೀರಿಸಲು ಮನೆಗಳ್ಳತನ ಹಾಗೂ ನೆಲಮಂಗಲ ಟೌನ್, ರಾಜಾನುಕುಂಟೆ, ಬೆಂಗಳೂರು ನಗರ, ಕನಕಪುರ, ತಾವರೆಕೆರೆ ಮುಂತಾದ ಕಡೆ ಸರಗಳ್ಳತನ ಮಾಡಿ, ಅವುಗಳನ್ನು ಅಟ್ಟಿಕಾ ಗೋಲ್ಡ್ ಕಂಪೆನಿಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿ ಶಿವಕುಮಾರ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಗಿದೆ. ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯ ಬಸವನಹಳ್ಳಿ ಬಳಿ ಮಹಿಳೆಯ ಸರ ಕದಿಯಲು ಪ್ರಯತ್ನಿಸುತ್ತಿದ್ದಾಗ ಆರೋಪಿ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.