ಬೆಂಗಳೂರು | ಅಕ್ರಮವಾಗಿ ಒಂದು ಕೆ.ಜಿ. ಚಿನ್ನ ಸಾಗಾಣೆ : ವ್ಯಕ್ತಿಯ ಬಂಧನ
ಸಾಂದರ್ಭಿಕ ಚಿತ್ರ Photo: freepik
ಬೆಂಗಳೂರು : ನಗರದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನಿಂದ ಒಟ್ಟು77.57 ಲಕ್ಷ ರೂ. ಮೌಲ್ಯದ 1092.5 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಜು.3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ದುಬೈನಿಂದ ಇ.ಕೆ.-566 ವಿಮಾನ ಮೂಲಕ ಬಂದ ವ್ಯಕ್ತಿಯು ತನ್ನ ಒಳ ಉಡುಪಿನಲ್ಲಿ 1092.5 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಬಂಧಿತ ವ್ಯಕ್ತಿಯು ಬೊಮ್ಮನಹಳ್ಳಿ ನಿವಾಸಿಯಾಗಿದ್ದು, ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣಿಸಿದ್ದ ಎನ್ನಲಾಗಿದೆ. ಇಮ್ಮಿಗ್ರೇಷನ್ ಕ್ಲಿಯರೆನ್ಸ್ ಬಳಿಕ ವ್ಯಕ್ತಿಯ ನಡವಳಿಕೆ ಅನುಮಾನಾಸ್ಪವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ವ್ಯಕ್ತಿಯ ಒಳಉಡುಪಿನಲ್ಲಿ ಚೀಲ ಕಂಡುಬಂದಿದ್ದು. ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಪೇಸ್ಟ್ ರೀತಿಯ ಚಿನ್ನವನ್ನು ಎರಡು ಆಯತಾಕಾರದ ಬಿಳಿ-ಟೇಪ್ ಪ್ಯಾಕೆಟ್ಗಳಲ್ಲಿ ಒಳಉಡುಪಿನಲ್ಲಿ ಇರಿಸಿಕೊಂಡಿದ್ದಾಗಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ವ್ಯಕ್ತಿ ತಪ್ಪೊಪ್ಪಿಕೊಡಿದ್ದು, ಚಿನ್ನ ಪಡೆದು ಕೃತ್ಯಕ್ಕೆ ಎಮಿರೇಟ್ಸ್ ವಿಮಾನದ ಸಿಬ್ಬಂದಿಯೊಬ್ಬ ಸಹಕಾರ ನೀಡಿರುವುದಾಗಿಯೂ ಹೇಳಿದ್ದಾನೆ. ಈತನ ಹೇಳಿಕೆಯ ಆಧಾರದ ಮೇಲೆ ಎಮಿರೇಟ್ಸ್ ಏರ್ಲೈನ್ ಸಿಬ್ಬಂದಿಯೋರ್ವನನ್ನೂ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.