ಬೆಂಗಳೂರು | ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತು ಹೆಚ್ಚಳ : ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು: ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತನ್ನು ಹೆಚ್ಚಳ ಮಾಡಲಾಗುವುದು ಹಾಗೂ ಅಗತ್ಯತೆ ಇರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಲಾಗುವುದು ಎಂದು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರನಲ್ಲಿ ಏರ್ಪಡಿಸಿದ್ದ ಮಾಸಿಕ ಜನಸಂಪರ್ಕ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸಂತನಗರದಲ್ಲಿ ಮಹಿಳಾ ಪಿಜಿಗಳು ಹೆಚ್ಚಾಗಿರುವುದರಿಂದ ಕೆಲಸ ಮುಗಿಸಿ ತಡರಾತ್ರಿ ಪಿಜಿಗೆ ಬರುವ ಮಹಿಳೆಯರನ್ನು ಕೆಲವು ಯುವಕರು ಚುಡಾಯಿಸುತ್ತಾರೆ ಎನ್ನುವ ದೂರುಗಳು ಕೇಳಿಬಂದಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರಾತ್ರಿ ಗಸ್ತನ್ನು ಹೆಚ್ಚಳ ಮಾಡಲಾಗುವುದು ಎಂದರು.
ನಗರದ ಪ್ಯಾಲೆಸ್ ಗುಟ್ಟಹಳ್ಳಿಯ ವಿನಾಯಕ ಸರ್ಕಲ್‍ನ ಎರಡೂ ಕಡೆಗಳಲ್ಲಿ ವಾಹನಗಳನ್ನು ಪಾಕಿರ್ಂಗ್ ಮಾಡುವುದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿಕೊಂಡರು. ಇದೇ ವೇಳೆ ಆಯುಕ್ತ ಬಿ.ದಯಾನಂದ್ ಅವರು ಸಂಚಾರ ವಿಭಾಗದ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್., ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಹಾಗೂ ಕೇಂದ್ರ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.