ಬೆಂಗಳೂರು| ಇಂಟರ್ ಸ್ಕೂಲ್ ಕ್ವಿಝ್: 3500ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗಿ
ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್-ಬೆಂಗಳೂರು ವತಿಯಿಂದ ಇಂಟರ್ ಸ್ಕೂಲ್ ಕ್ವಿಝ್ ಕಾರ್ಯಕ್ರಮವು ಶನಿವಾರ ನಗರದ ಯಲಹಂಕದ ಗೋವಿಂದಪುರದಲ್ಲಿನ ಕ್ಯಾಂಪಸ್‍ನಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿಯ ಹ್ಯಾನ್ಸೆಲ್ ರಿಜು ಮ್ಯಾಥ್ಯೂ ಮತ್ತು ವರುಣ್ ಗೋಯಲ್ ಅವರು ವಿಜೇತರಾಗಿ ಆಕರ್ಷಕ ಟ್ರೋಫಿಯೊಂದಿಗೆ 1.50ಲಕ್ಷ ರೂ.ನಗದು ಬಹುಮಾನವನ್ನು ಪಡೆದಿದ್ದಾರೆ.
ಕಾರ್ಯಕ್ರಮವನ್ನು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ನ ಕುಲಪತಿ ಪ್ರೋ.ಡಾ.ಮಧು ವೀರರಾಘವನ್ ಉದ್ಘಾಟಿಸಿದ್ದು, 3500ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿಲಿಗುರಿಯ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್‍ನ ರೋನಿತ್ ಬೋತ್ರಾ ಮತ್ತು ಕುಶಾಗ್ರಾ ಓಂ ದ್ವಿತೀಯ ಸ್ಥಾನ ಪಡೆದು ಟ್ರೋಫಿ ಜತೆಗೆ 1ಲಕ್ಷ ರೂ.ನಗದು ಬಹುಮಾನ ಪಡೆದರು. ಚೆನ್ನೈನ ಎಎಂಎಂ ಶಾಲೆಯ ಆರ್ಯನ್ ಘೋಷ್ ಮತ್ತು ಎಸ್.ಅಶ್ವಂತ್ ತೃತೀಯ ಸ್ಥಾನ ಪಡೆದು ಟ್ರೋಫಿ ಜತೆಗೆ 50ಸಾವಿರ ರೂ. ನಗದು ಬಹುಮಾನ ಗಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ನ ಪ್ರೋ.ಮಧು ವೀರರಾಘವನ್ ಮಾತನಾಡಿ, ಇಂಟರ್-ಸ್ಕೂಲ್ ರಸಪ್ರಶ್ನೆ ಯಶಸ್ವಿಯಾಗಿ ಪೂರ್ಣಗೊಂಡಿರುವುದಕ್ಕೆ ನಾವು ಸಂತೋಷವಾಗಿದ್ದೇವೆ. ಸ್ಪರ್ಧೆಯಲ್ಲಿ ಹಾಜರಿದ್ದ ಯುವ ಮನಸ್ಸುಗಳು ಪ್ರದರ್ಶಿಸಿದ ಅಸಾಧಾರಣ ಪ್ರತಿಭೆಯ ಕುರಿತು ನಾನು ಹೆಮ್ಮೆಪಡುತ್ತೇನೆ. ಜ್ಞಾನದ ಅನ್ವೇಷಣೆಗೆ ಯಾವುದೇ ಮಿತಿಗಳಿಲ್ಲ, ಮತ್ತು ಈ ಕಾರ್ಯಕ್ರಮವು ನಮ್ಮ ಶಾಲಾ ಸಮುದಾಯದಲ್ಲಿನ ಬೌದ್ಧಿಕ ಚೈತನ್ಯದ ಅದ್ಭುತ ನಿದರ್ಶನವಾಗಿದೆ ಎಂದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ನ ಉಪ ಕುಲಸಚಿವ ಡಾ.ರಾಘವೇಂದ್ರ ಪ್ರಭು ಮಾತನಾಡಿ, ಮುಂಬರುವ ವರ್ಷಗಳಲ್ಲಿ ಇಂಟರ್ ಸ್ಕೂಲ್ ಕ್ವಿಜ್ ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಯಾಗಿ ಆಯೋಜಿಸಲಾಗುವುದು ಎಂದರು.