ಬೆಂಗಳೂರು| 700 ಮಂದಿಯಿಂದ ಹಣ ಹೂಡಿಕೆ ಮಾಡಿಸಿ ವಂಚನೆ: ಇಬ್ಬರ ಬಂಧನ
ಬೆಂಗಳೂರು: ಅಧಿಕ ಲಾಭ ನೀಡುವುದಾಗಿ ನಂಬಿಸಿ, ಸುಮಾರು 700 ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತರನ್ನು ಕೋಣನಕುಂಟೆಯ ಜಿ.ಎಸ್.ಪ್ರದೀಪ್ ಹಾಗೂ ನಾಗವಾರದ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಪ್ರದೀಪ್ ಪತ್ನಿ ಸೌಮ್ಯಾಳ ಪಾತ್ರದ ಬಗ್ಗೆಯೂ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಹಣ ನೀಡುವುದಾಗಿ ಆರೋಪಿಗಳು ಜಾಹಿರಾತು ನೀಡಿದ್ದರು. ಇದನ್ನೇ ನಂಬಿದ್ದ ಸಾರ್ವಜನಿಕರು 25 ಕೋಟಿ ರೂ.ನಷ್ಟು ಹೂಡಿಕೆ ಮಾಡಿದ್ದರು.
ಆರೋಪಿಗಳು, 2021ರಿಂದ ಜೆ.ಪಿ.ನಗರದ 9ನೇ ಹಂತದ ದೊಡ್ಡಕಲ್ಲಸಂದ್ರದ ನಾರಾಯಣನಗರದಲ್ಲಿ ‘ಪ್ರಮ್ಯಾ ಇಂಟರ್ ನ್ಯಾಷನಲ್’ ಎಂಬ ಹೆಸರಿನಲ್ಲಿ ಅಕ್ರಮವಾಗಿ ಕಚೇರಿ ತೆರೆದಿದ್ದು, ಇದೇ ಹೆಸರಿನಲ್ಲಿ ವೆಬ್‍ಸೈಟ್ ಕೂಡ ನಡೆಸುತ್ತಿದ್ದರು. ಈ ವೆಬ್‍ಸೈಟ್‍ನಲ್ಲಿ ಸಾರ್ವಜನಿಕರು ಹಣ ಹೂಡಿಕೆ ಮಾಡಿದರೆ ಶೇ 2.5ರಷ್ಟು ಪ್ರತಿ ತಿಂಗಳು ಲಾಭ ಬರುತ್ತದೆ ಎಂಬ ತಲೆಬರಹದಲ್ಲಿ ಆಯ್ದ ಹೂಡಿಕೆದಾರರಿಗೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ ಎಂದು ಹೇಳಿಕೊಂಡಿದ್ದರು.
ಪತಿ-ಪತ್ನಿಯಾಗಿರುವ ಪ್ರದೀಪ್ ಹಾಗೂ ಸೌಮ್ಯಾ ಇಬ್ಬರು ಮೊದಲು ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು. ನಂತರ ಇಬ್ಬರು ತಮ್ಮದೇ ಆದ ಕಂಪೆನಿಯನ್ನು ತೆರೆದು, ವೇಗವಾಗಿ ಹಣ ಗಳಿಸಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಪೆನಿಯಲ್ಲಿ ಹೂಡಿಕೆ ಮಾಡಿರುವವರು ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ಮತ್ತು ವಂಚನೆ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.