ವಿಪರೀತ ಸಂಚಾರ ದಟ್ಟಣೆಯಾಗುವ ವಿಶ್ವದ ನಗರಗಳ ಪೈಕಿ ಬೆಂಗಳೂರಿಗೆ ಆರನೇ ಸ್ಥಾನ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಪರೀತ ಸಂಚಾರ ದಟ್ಟಣೆ ಉಂಟಾಗುವ ವಿಶ್ವದ ಪ್ರಮುಖ ನಗರಗಳ ಪೈಕಿ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಆರನೇ ಸ್ಥಾನ ಸಿಕ್ಕಿದೆ.
ರಸ್ತೆ ಸಂಚಾರ ದಟ್ಟಣೆ ಬಗ್ಗೆ ಅಧ್ಯಯನ ನಡೆಸುವ ಟಾಮ್ಟಾಮ್ ಸಂಸ್ಥೆಯ 2023ರ ವರದಿಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಮೊದಲ ಸ್ಥಾನದಲ್ಲಿ ಲಂಡನ್, ಎರಡು ಹಾಗೂ ಮೂರನೇ ಸ್ಥಾನದಲ್ಲಿ ಕ್ರಮವಾಗಿ ಐರ್ಲೆಂಡ್ ರಾಜಧಾನಿ ಡಬ್ಲಿನ್ ಮತ್ತು ಕೆನಡಾದ ಟೊರಾಂಟೋ ನಗರವಿದೆ. ಪುಣೆ ನಗರ ಏಳನೇ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ವಾಹನಗಳ ವೇಗಮಿತಿ 2022ರಲ್ಲಿ ಪ್ರತಿ ಗಂಟೆಗೆ 14 ಕಿ.ಮೀ ಇತ್ತು. ಇದು 2023ರಲ್ಲಿ 18 ಕಿ.ಮೀಗೆ ಏರಿಕೆಯಾಗಿದೆ. 2022ರಲ್ಲಿ 10 ಕಿ.ಮೀ ಪ್ರಯಾಣಕ್ಕೆ 28.11 ನಿಮಿಷ ಬೇಕಾಗುತ್ತಿತ್ತು. ಅದು 2023ರಲ್ಲಿ 27 ನಿಮಿಷ 11 ಸೆಕೆಂಡ್ಗೆ ತಗ್ಗಿದ್ದು, 1 ನಿಮಿಷ ಇಳಿಕೆಯಾಗಿದೆ. ವಿಶ್ವದ 10 ನಗರಗಳ ಪೈಕಿ ಬೆಂಗಳೂರು ನಗರದಲ್ಲಿ ಮಾತ್ರವೇ ಪ್ರಯಾಣ ಸಮಯ ಒಂದು ನಿಮಿಷ ಕಡಿಮೆ ಎಂದು ವರದಿ ತಿಳಿಸಿದೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದು, ಸಂಚಾರ ಪೊಲೀಸರು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದರಿಂದ ದಟ್ಟಣೆ ಕಡಿಮೆಯಾಗುತ್ತಿದೆ. ಹೆಬ್ಬಾಳ, ಟಿನ್ ಫ್ಯಾಕ್ಟರಿ, ಗೊರಗುಂಟೆಪಾಳ್ಯ ಹಾಗೂ ಸಾರಕ್ಕಿ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಾಹನ ದಟ್ಟಣೆಯಾಗುತ್ತಿದ್ದ ರಸ್ತೆ ವಿಭಜಕಗಳನ್ನು ಮುಚ್ಚಿಸಲಾಗಿದೆ. ಅನಗತ್ಯ ಬಸ್ ನಿಲ್ದಾಣಗಳ ತೆರವು ಮಾಡಿರುವುದು, ಅವೈಜ್ಞಾನಿಕವಾಗಿರುವ ಯೂಟರ್ನ್ ರಸ್ತೆ ಮುಚ್ಚಿರುವುದು ಹಾಗೂ ಫ್ರೀ ಸಿಗ್ನಲ್ ಒತ್ತು ನೀಡಿದ್ದರಿಂದ ಸರಾಗ ವಾಹನ ಸಂಚಾರಕ್ಕೆ ಅನುವಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಅಗಲೀಕರಣ ಹಾಗೂ ಉನ್ನತೀಕರಣಗೊಳಿಸಲು ಬಿಬಿಎಂಪಿ ಜೊತೆ ಸಮನ್ವಯತೆ ಸಾಧಿಸಿ ಅಭಿವೃದ್ಧಿಪಡಿಸಲಾಗಿದೆ. ಸಂಚಾರ ಹೆಚ್ಚಿರುವ ಸಮಯದಲ್ಲಿ ಭಾರೀ ಗಾತ್ರದ ವಾಹನ ಸಂಚಾರ ನಿಷೇಧ ಹಾಗೂ ಹೈಟೆಕ್ ತಂತ್ರಜ್ಞಾನ ಬಳಕೆ ಸೇರಿದಂತೆ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅನುಷ್ಠಾನ ಮಾಡಿದ್ದರಿಂದಲೇ ಸಂಚಾರ ದಟ್ಟಣೆ ಕಡಿಮೆಯಾಗಿ, ಪ್ರಯಾಣದ ಸಮಯ ಕೊಂಚ ಇಳಿಕೆಯಾಗಿದೆ ಎಂದು ಬಿ.ದಯಾನಂದ್ ಹೇಳಿದ್ದಾರೆ.
ಸಂಚಾರ ದಟ್ಟಣೆಯನ್ನು ಇನ್ನಷ್ಟು ತಗ್ಗಿಸಲು ಭವಿಷ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಇದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ(ಎಐ) ಆಧಾರಿತ ಟ್ರಾಫಿಕ್ ಸಿಗ್ನಲ್ ಬಳಸಲು ಚಿಂತನೆ ನಡೆಸಲಾಗಿದೆ. ನಗರದ ಎಲ್ಲೆಡೆ ಕ್ಯಾಮರಾ ಅಳವಡಿಕೆಯಾದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ(ಎಐ) ನೆರವಿನಿಂದ ಸಂಚಾರ ದಟ್ಟಣೆಯಾಗುವುದನ್ನು ಗುರುತಿಸಬಹುದು ಎಂದು ಬಿ.ದಯಾನಂದ್ ತಿಳಿಸಿದ್ದಾರೆ.