ಬೆಂಗಳೂರು | ಮಗಳ ಅಶ್ಲೀಲ ಫೋಟೋ ಅಳಿಯನಿಗೆ ಕಳಿಸುವುದಾಗಿ ತಾಯಿಗೆ ಬೆದರಿಕೆ: ಮೂವರು ಸೆರೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪರಿಚಿತ ಮಹಿಳೆಯ ಫೋಟೋಗಳನ್ನು ಮಾರ್ಫ್ ಮಾಡಿ, ಅವರ ತಾಯಿಯಿಂದ ಹಣ ಪೀಕುತ್ತಿದ್ದ ಆರೋಪದಡಿ ರೌಡಿಶೀಟರ್ ಸಹಿತ ಮೂವರು ಆರೋಪಿಗಳನ್ನು ಇಲ್ಲಿನ ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಜೈಲಿನಲ್ಲಿದ್ದ ರೌಡಿಶೀಟರ್ ಮನು ಯಾನೆ ಕೆಂಚ ಸೇರಿದಂತೆ ಯೋಗೇಶ್, ಸುಭಾಶ್ ಎಂಬುವರನ್ನು ಬಂಧಿಸಲಾಗಿದೆ.
ದೂರುದಾರ ಮಹಿಳೆಗೆ 2023ರ ಆಗಸ್ಟ್ ನಲ್ಲಿ ಆರೋಪಿ ತನ್ನ ನಂಬರಿನಿಂದ ವಾಟ್ಸಾಪ್ ಮೂಲಕ ಆಕೆಯ ವಿವಾಹಿತ ಮಗಳ ಅಶ್ಲೀಲ ಫೋಟೊ ಕಳಿಸಿದ್ದ. ತಕ್ಷಣ ದೂರುದಾರೆ ಆ ನಂಬರಿಗೆ ಕರೆ ಮಾಡಿದಾಗ ‘ನಿನ್ನ ಮಗಳ ಇಂತಹ ಬೆತ್ತಲೆ ಫೋಟೋಗಳು ನನ್ನ ಬಳಿ ಇವೆ. ಅವುಗಳನ್ನು ನಿನ್ನ ಅಳಿಯನಿಗೆ ಕಳಿಸುತ್ತೇನೆ. ಬೇಡವಾದರೆ 40 ಸಾವಿರ ರೂ ಕೊಡಬೇಕು' ಎಂದು ಆರೋಪಿ ಬೆದರಿಕೆ ಹಾಕಿದ್ದನು.
ಭಯಗೊಂಡ ಮಹಿಳೆ ಆತ ಹೇಳಿದಂತೆ ಎರಡು ಖಾತೆಗಳಿಗೆ ತಲಾ 20 ಸಾವಿರದಂತೆ 40 ಸಾವಿರ ರೂ. ಹಣ ವರ್ಗಾಯಿಸಿದ್ದರು. ಆದರೆ 2024ರ ಫೆಬ್ರವರಿ 9ರಂದು ಪುನಃ ವಾಟ್ಸಾಪ್ಗೆ ಕರೆ ಮಾಡಿದ್ದ ಕಾರ್ತಿಕ್ ಎಂಬಾತ, ‘ನಾನು ಮನು ಕಡೆಯವನು, 5 ಲಕ್ಷ ರೂ. ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೋಗಳನ್ನು ನಿನ್ನ ಅಳಿಯನಿಗೆ ಕಳಿಸುತ್ತೇನೆ' ಎಂದು ಬೆದರಿಸಿದ್ದಾನೆ. ಫೆಬ್ರವರಿ 12ರಂದು ಮನು ಮತ್ತು ಆತನ ಕಡೆಯವರು ಸಾಕಷ್ಟು ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನನ್ವಯ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗೆ ಸಾಥ್ ನೀಡಿದ್ದ ಮಹಿಳೆಯೊಬ್ಬಳನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.