ಬೆಂಗಳೂರು | ಕುಡಿಯುವ ನೀರಿನ ಮಿತ ಬಳಕೆಗೆ ಸೂಚನೆ: ದುರ್ಬಳಕೆ ಕಂಡುಬಂದಲ್ಲಿ ದಂಡದ ಎಚ್ಚರಿಕೆ
ಬೆಂಗಳೂರು, ಮಾ.8: ಬೆಂಗಳೂರು ನಗರದಲ್ಲಿ ನೀರಿನ ಬವಣೆ ತೀವ್ರಗೊಂಡಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ(BWSSB) ನೀರಿನ ದುರ್ಬಳಕೆ ತಡೆಗಟ್ಟಲು ಮುಂದಾಗಿದೆ.
ಸಾರ್ವಜನಿಕರು ಕುಡಿಯುವ ನೀರು ಮಿತವಾಗಿ ಬಳಸುವಂತೆ ಸೂಚನೆ ನೀಡಿರುವ BWSSB, ಕಾರಂಜಿಯಂತಹ ಮನೋರಂಜಕ ವ್ಯವಸ್ಥೆಗೆ ಅಥವಾ ವಾಹನಗಳನ್ನು ತೊಳೆಯಲು ಇತ್ಯಾದಿಗಳಿಗೆ ಕುಡಿಯುವ ಬಳಕೆ ಮಾಡಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆಗೆ, ಕೈದೋಟ, ಕಟ್ಟಡ ನಿರ್ಮಾಣ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನೆಮಾ ಥಿಯೇಟರ್, ಮಾಲುಗಳಲ್ಲಿ, ರಸ್ತೆ ನಿರ್ಮಾಣಕ್ಕೆ ಬಳಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಉಲ್ಲಂಘನೆ ಮರುಕಳಿಸಿದರೆ ಮತ್ತೆ 5 ಸಾವಿರ ರೂ. ದಂಡದೊಂದಿಗೆ ಹೆಚ್ಚುವರಿಯಾಗಿ ಪ್ರತಿದಿನಕ್ಕೆ 500 ರೂ.ನಂತೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ನೀರಿನ ದುರ್ಬಳಕೆ ಕಂಡುಬಂದಲ್ಲಿ BWSSB ಕಾಲ್ ಸೆಂಟರ್ ಸಂಖ್ಯೆ 1916ಗೆ ಮಾಹಿತಿ ನೀಡುವಂತೆ ಮಂಡಳಿಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.