ಬೆಂಗಳೂರು| ಬೀದಿ ಬದಿ ವ್ಯಾಪಾರಿಗಳ ತೆರವು ಖಂಡಿಸಿ ಪ್ರತಿಭಟನೆ
ಬೆಂಗಳೂರು: ಅಧಿಕಾರಿಗಳು ಕಾನೂನುಗಳ ಮತ್ತು ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ಬೆಂಗಳೂರು ನಗರದಾದ್ಯಂತ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುತ್ತಿದ್ದು, ಇದನ್ನು ಖಂಡಿಸಿ ವ್ಯಾಪಾರಿಗಳು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಮಂಗಳವಾರದಂದು ಪ್ರತಿಭಟನೆಯನ್ನು ನಡೆಸಿದರು.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಬಾಬು ಮಾತನಾಡಿ, ಬೀದಿ ವ್ಯಾಪಾರ ಮಾಡುವ ಹಕ್ಕು ಸಂವಿಧಾನದಲ್ಲಿ ನಮಗೆ ನೀಡಲಾಗಿದೆ. ಸಂವಿಧಾನವನ್ನು ಅನುಸರಿಸುತ್ತ ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-2014ನ್ನು ಜಾರಿಗೊಳಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳನ್ನು ರಕ್ಷಿಸಬೇಕು ಎಂದು ನ್ಯಾಯಾಲಯದ ತೀರ್ಪುಗಳೂ ಹೇಳಿವೆ ಎಂದರು.
ಬೀದಿ ವ್ಯಾಪಾರಿಗಳನ್ನು ರಕ್ಷಿಸುವ ಕಾನೂನನ್ನು ಬಿಬಿಎಂಪಿ ಬಹಿರಂಗವಾಗಿ ಉಲ್ಲಂಘಿಸಿ ನಮ್ಮನ್ನು ಎತ್ತಂಗಡಿ ಮಾಡುತ್ತಿದ್ದಾರೆ. ಅದರಲ್ಲೂ ಜಯನಗರ 4ನೇ ಬ್ಲಾಕ್ ನಲ್ಲಿ 10 ತಿಂಗಳಿಂದ ವ್ಯಾಪಾರ ಮಾಡಲು ಬಿಡದೆ ಕಿರುಕುಳ ನೀಡುತ್ತಿದ್ದಾರೆ. ಸೆಪ್ಟೆಂಬರ್ 2017ರಲ್ಲಿ ಬಿಬಿಎಂಪಿ ವತಿಯಿಂದ 20 ಸಾವಿರ ಬೀದಿ ವ್ಯಾಪಾರಿಗಳನ್ನು ಗುರುತಿಸಿ, ಗುರುತಿನ ಚೀಟಿ ಮತ್ತು ವ್ಯಾಪಾರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು ಎಂದು ಅವರು ಸ್ಪಷ್ಟಪಡಿಸಿದರು.
ಸಂಘದ ಕಾರ್ಯದರ್ಶಿ ಪಿ.ಪಿ.ಅಪ್ಪಣ್ಣ ಮಾತನಾಡಿ, ನಗರದಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನ ಬೀದಿ ವ್ಯಾಪಾರದ ಮೇಲೆ ಅವಲಂಬಿತರಾಗಿದ್ದು, ಈ ಬೀದಿ ವ್ಯಾಪಾರಿಗಳನ್ನು ಬಿಬಿಎಂಪಿಯ ಸಮೀಕ್ಷೆಯಲ್ಲಿ ಸೇರ್ಪಡೆ ಮಾಡಿಲ್ಲ. ಕಾನೂನಿನ ಪ್ರಕಾರ ಪ್ರತಿ 5 ವರ್ಷಕ್ಕೆ ಬಿಬಿಎಂಪಿಯು ಬೀದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಶಶಿಕಲಾ ಮಾತನಾಡಿ, ಈಗ ಸಮೀಕ್ಷೆ ನಡೆಸಿ 5 ವರ್ಷಗಳು ಕಳೆದಿದ್ದು, ಬಿಬಿಎಂಪಿಯು ಮರು ಸಮೀಕ್ಷೆಯನ್ನು ಶುರು ಮಾಡಲು ಮುಂದಾಗುತ್ತಿಲ್ಲ. ಮುಂಚೆ ನೀಡಿದ ಗುರುತಿನ ಚೀಟಿ, ವ್ಯಾಪಾರದ ಪ್ರಮಾಣ ಪತ್ರದ ಸಿಂಧುತ್ವವೂ ಮುಗಿದಿರುತ್ತದೆ. ಅದರ ನವೀಕರಣದ ಕುರಿತು ಬಿಬಿಎಂಪಿಯು ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ ಎಂದು ತಿಳಿಸಿದರು.
ಸಂಘದ ಜಂಟಿ ಕಾರ್ಯದರ್ಶಿ ಸಯ್ಯದ್ ಝಮೀರ್ ಮಾತನಾಡಿ, ನಗರದಲ್ಲಿ ಎಲ್ಲರಿಗೂ ಬದುಕಲು ಹಕ್ಕು ಇದೆ. ಬೀದಿಗಳಲ್ಲಿ ವ್ಯಾಪಾರ ಮಾಡುತ್ತಾ ನಮ್ಮ ಕುಟುಂಬಗಳನ್ನು ಸಾಕುವ ನಾವು, ಬೀದಿ-ರಸ್ತೆಗಳಲ್ಲಿ ಮಾರಾಟ ಮಾಡದಿದ್ದರೇ, ನಗರದ ಮಧ್ಯಮವರ್ಗದವರು ಮತ್ತು ಬಡವರು ಎಲ್ಲಿ ಹೋಗುವರು? ಎಲ್ಲರಿಗೂ ಮಾಲುಗಳಲ್ಲಿ, ಮಾರ್ಟ್ ಗಳಲ್ಲಿ ಕೊಳ್ಳಲು ಸಾಧ್ಯವೇ? ಇದನ್ನು ಸರಕಾರಗಳು, ಶ್ರೀಮಂತರು ಅರ್ಥ ಮಾಡಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಹಕ್ಕೊತ್ತಯ ಪತ್ರ ಸಲ್ಲಿಕೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಯಗಳ ಮನವಿ ಪತ್ರವನ್ನು ಬಿಬಿಎಂಪಿ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಸಲ್ಲಿಸಿದರು. ಜಯನಗರ, ಮಹದೇವಪುರ, ಮಲ್ಲೇಶ್ವರಂ, ಬನಶಂಕರಿ, ಮೂಡಲಪಾಳ್ಯ ಹಾಗು ಇತರೆ ಪ್ರದೇಶಗಳಲ್ಲಿ ಎತ್ತಂಗಡಿ ಮಾಡಿದ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಮರುವ್ಯಾಪಾರ ಮಾಡುವಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಷ್ಟು ದಿವಸ ಅವರಿಗೆ ಆದ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ನೀಡಿರುವ ಗುರುತಿನ ಚೀಟಿ/ ವ್ಯಾಪಾರದ ಪ್ರಮಾಣ ಪತ್ರಗಳನ್ನು ಶೀಘ್ರದಲ್ಲೇ ನವೀಕರಿಸಬೇಕು. ಸಮೀಕ್ಷೆ ಕುರಿತು ಬೀದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಬೇಕು, ಮತ್ತು ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಾವಿರಾರು ಜನ ಬೀದಿ ವ್ಯಾಪಾರಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು. ವಿಜಯನಗರ, ಶಿವಾಜಿನಗರ, ಜಯನಗರ, ಬನಶಂಕರಿ, ಸಾರಕ್ಕಿ, ಕೋರಮಂಗಲ, ಫ್ರೇಜರ್ ಟೌನ್, ಮಲ್ಲೇಶ್ವರಂ, ಗಾಂಧಿನಗರ, ಪೀಣ್ಯ ದಾಸರಹಳ್ಳಿ, ಗಾಂಧಿ ಬಝಾರ್, ಮತ್ತು ಇತ್ಯಾದಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುತ್ತಿರುವವರು ಬಿಬಿಎಂಪಿ ಕಚೇರಿಗೆ ಬಂದಿದ್ದರು.
‘ಮುಂದಿನ ವಾರ ಬಿಬಿಎಂಪಿ ಆಯುಕ್ತರೊಂದಿಗೆ ಸಭೆ ನಡೆಸಿ, ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲು, ಗುರುತಿನ ಚೀಟಿ/ವ್ಯಾಪಾರ ಪ್ರಮಾಣ ಪತ್ರವನ್ನು ನವೀಕರಿಸುವ ಕುರಿತು ಚರ್ಚೆ ಮಾಡಲಾಗುವುದು. ಹಾಗೆಯೇ ಎತ್ತಂಗಡಿ ಮಾಡಲಾಗುತ್ತಿರುವ ವಿಚಾರವನ್ನು ಚರ್ಚಿಸಲಾಗುವುದು’
-ಬಾಬುಶೇಖರ್ ರೆಡ್ಡಿ, ಕಲ್ಯಾಣ ಮತ್ತು ಅರೋಗ್ಯ ವಿಭಾಗದ ಬಿಬಿಎಂಪಿ ವಿಶೇಷ ಆಯುಕ್ತ
....................