ಬೆಂಗಳೂರು ಟೆಕ್ ಶೃಂಗಸಭೆ ಅಭೂತಪೂರ್ವ ಯಶಸ್ಸು : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬೆಂಗಳೂರು ಟೆಕ್ ಶೃಂಗಸಭೆಯು ಟೆಕ್ ತಜ್ಞರು, ಶ್ರೀಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ, ಭಾರತದ ಅತೀ ದೊಡ್ಡ ಶೃಂಗಸಭೆಯಾಗಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಶೃಂಗಸಭೆಯಲ್ಲಿ 51 ದೇಶಗಳು ಮತ್ತು 521 ಜಾಗತಿಕ ಸ್ಪೀಕರ್‌ಗಳು ಭಾಗವಹಿಸಿ ನವೋದ್ಯಮಗಳ ಅಭಿವೃದ್ಧಿ, ಪಾಲುದಾರಿಕೆ, ಉದ್ಯಮಶೀಲತೆಗೆ ‘ಭದ್ರಬುನಾದಿ ಹಾಕುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗುರುವಾರ ಬೆಂಗಳೂರು ಅರಮನೆ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ 51 ದೇಶಗಳು, 521 ಸ್ಪೀಕರ್‌ಗಳು, 5210 ಸಮ್ಮೇಳನದ ಪ್ರತಿನಿಧಿಗಳು, 15,465 ಒಟ್ಟು ನೋಂದಾಯಿತ ಪ್ರತಿನಿಧಿಗಳು, 683 ಪ್ರದರ್ಶಕರು, 21,372 ನೋಂದಾಯಿತ ವ್ಯಾಪಾರ ಸಂದರ್ಶಕರು ಸೇರಿದಂತೆ ಒಟ್ಟು 36,837 ಮಂದಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಸಮ್ಮೇಳನದ ಮುಖ್ಯಾಂಶಗಳು: 684 ಒಳನೋಟವುಳ್ಳ ಸೆಷನ್‍ಗಳನ್ನು ಒಳಗೊಂಡಿತ್ತು. 521 ಉದ್ಯಮ ತಜ್ಞರು ಭಾಗವಹಿಸಿದ್ದರು. 50 ನವೋದ್ಯಮ ಉತ್ಪನ್ನಗಳನ್ನು ಅನಾವರಣ ಗೊಳಿಸಲಾಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ 35 ಸಾವಿರಕ್ಕೂ ಹೆಚ್ಚು ಲೈವ್ ವೀಕ್ಷಣೆಗಳು ಆಗಿವೆ ಎಂದು ಅವರು ಹೇಳಿದರು.
4,683 ಪ್ರತಿನಿಧಿಗಳು ಇಂಟರ್‍ಲಿನ್ ಎಕ್ಸ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ, 26,766 ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅರ್ಥಪೂರ್ಣ ಸಂಭಾಷಣೆಗಳನ್ನು ಪ್ರಾರಂಭಿಸುತ್ತಿದ್ದಾರೆ. ವಿನಿಮಯವಾದ 4,775 ಸಭೆಗಳಲ್ಲಿ, 570 ಸಭೆಗಳನ್ನು ಬಿ2ಬಿ ಲಾಂಜ್‍ನಲ್ಲಿ ನಡೆಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಶೃಂಗಸಭೆಯ ಮೈಲುಗಲ್ಲುಗಳು: ಕರ್ನಾಟಕ ಜಿಸಿಸಿ ನೀತಿ ಬಿಡುಗಡೆ, ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿ ಜಾರಿ, ಕರ್ನಾಟಕದ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯ ಸಹಕಾರ ಮತ್ತು ಉತ್ತೇಜನದ ಕುರಿತು ಕರ್ನಾಟಕ ಸರಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವಿನ ಒಡಂಬಡಿಕೆಗೆ ವೇದಿಕೆಯಾಯಿತು ಎಂದು ಅವರು ಹೇಳಿದರು.
ಐಬಿಎಂ, ಇಂಟೆಲ್, ಮೈಕ್ರೋಸಾಫ್ಟ್, ಎನ್‍ವಿಡಿಯಾ ಸೇರಿದಂತೆ ಅನೇಕ ಪ್ರತಿಷ್ಠಿತ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಯುವಪೀಳಿಗೆಯ ಕೌಶಲ್ಯ ವೃದ್ಧಿಸಿ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿಪುಣ ಕರ್ನಾಟಕ ಯೋಜನೆ ಜಾರಿ. ಬಯೋಟೆಕ್ ಟ್ರ್ಯಾಕ್ ಉದ್ಘಾಟನೆ. ಸ್ಟ್ಯಾನ್ ಫೋರ್ಡ್ ಬಯೋ ಜೊತೆ ಉದ್ದೇಶ ಪತ್ರಕ್ಕೆ ಸಹಿ. ಡಿಜಿಟಲ್ ಆರೋಗ್ಯ ಸಹಯೋಗವನ್ನು ಮುನ್ನಡೆಸಲು ಹೆಲ್ತ್ ಟೆಕ್‍ಹಬ್ ಕೋಪನ್‍ಹೇಗನ್‍ನೊಂದಿಗೆ ಜಂಟಿ ಸಹಯೋಗ ಘೋಷಿಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಐಐಟಿ ಅಲುಮ್ನಿ ಸೆಂಟರ್ ಬೆಂಗಳೂರು ಜೊತೆಗೆ ಎಐನಲ್ಲಿ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ. ಕರ್ನಾಟಕದಲ್ಲಿ ಆಳವಾದ ತಾಂತ್ರಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಇನ್ನೋವರ್ಸ್ ಎಂಬ ನಾವೀನ್ಯತೆ ಕ್ಯಾಂಪಸ್‍ನ ಉದ್ಘಾಟನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹೂಡಿಕೆದಾರರ ಸಂಪರ್ಕ: ಮೂರು ದಿನಗಳಲ್ಲಿ 100 ಕ್ಕೂ ಹೆಚ್ಚು ಹೂಡಿಕೆದಾರರಿಗೆ 300ಕ್ಕೂ ಹೆಚ್ಚು ನವೋದ್ಯಮಗಳನ್ನು ಸಂಪರ್ಕಿಸಲಾಗಿದೆ. 300 ನವೋದ್ಯಮಗಳಲ್ಲಿ 23 ನವೋದ್ಯಮಗಳು ಕಲ್ಪನೆಯ ಹಂತದಿಂದ, 75 ಪರಿಕಲ್ಪನೆ ಮೌಲ್ಯೀಕರಣ ಹಂತದಿಂದ, 140 ಆರಂಭಿಕ ಹಂತದಿಂದ ಮತ್ತು 80 ಬೆಳವಣಿಗೆಯ ಹಂತದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮೆಂಟರ್-ಮೆಂಟೀ ಕನೆಕ್ಟ್: ಉದ್ಯಮಶೀಲತೆಯ ಬೆಳವಣಿಗೆಯನ್ನು ಉತ್ತೇಜಿಸಲು 120ಕ್ಕೂ ಹೆಚ್ಚು ಬಡ್ಡಿಂಗ್ ನವೋದ್ಯಮಗಳೊಂದಿಗೆ 18 ನಿಪುಣ ಮಾರ್ಗದರ್ಶಕರು ತೊಡಗಿಸಿಕೊಂಡಿದ್ದರು. ಕ್ಲೀನ್-ಟೆಕ್, ಮೆಡ್-ಟೆಕ್, ಅಗ್ರಿ-ಟೆಕ್, ಎಐ, ಬ್ಲಾಕ್‍ಚೈನ್ ಸೇರಿದಂತೆ ವಿವಿಧ ವಲಯಗಳನ್ನು ವ್ಯಾಪಿಸಿರುವ ಸ್ಟಾರ್ಟ್ ಅಪ್‍ಗಳಿಂದ 50 ಅದ್ಭುತ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು ಎಂದು ಅವರು ತಿಳಿಸಿದರು.
ಕರ್ನಾಟಕವು ಸ್ಟಾರ್ಟ್ ಅಪ್ ಜಿನೋಮ್‍ನ ಸಹಭಾಗಿತ್ವದಲ್ಲಿ ಹೈಪರ್‍ಗ್ರೋತ್ ಕರ್ನಾಟಕ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಜ್ಜಾಗಿದೆ. ಸ್ಟಾರ್ಟ್ ಅಪ್‍ಗಳಿಗೆ ಮಾರ್ಗದರ್ಶನವನ್ನು ಒದಗಿಸಲು ಮತ್ತು ನಿಧಿಸಂಗ್ರಹಣೆಯ ಅವಕಾಶಗಳನ್ನು ಸುವ್ಯವಸ್ಥಿತಗೊಳಿಸಲು ಲೆಟ್ಸ್ ವೆಂಚರ್‌ನೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಮೂಲಕ 30ಕ್ಕೂ ಹೆಚ್ಚು ದೇಶಗಳೊಂದಿಗೆ ಕರ್ನಾಟಕದ ಅಂತರ್ ರಾಷ್ಟ್ರೀಯ ಪಾಲುದಾರಿಕೆಯನ್ನು ಮಾಡಿಕೊಂಡಿತು. ಸ್ವೀಡನ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ನಿಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್ ಟೆಕ್, ಬಯೋಟೆಕ್ ಮತ್ತು ಮೆಡ್‍ಟೆಕ್ ಮತ್ತು ಹೆಲ್ತ್ ಕೇರ್ ಸೇರಿದಂತೆ ವಲಯಗಳಿಂದ ವೈವಿಧ್ಯಮಯ ಶ್ರೇಣಿಯ ಸ್ಟಾರ್ಟ್ ಅಪ್‍ಗಳನ್ನು ತಂದಿತು ಎಂದು ಅವರು ಹೇಳಿದರು.
ಫಿನ್‍ಲ್ಯಾಂಡ್ ಮತ್ತು ಸ್ವಿಟ್ಜರ್ ಲ್ಯಾಂಡ್‍ನೊಂದಿಗೆ ಎಂಒಯುಗಳಿಗೆ ಸಹಿ ಹಾಕಲಾಯಿತು. ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಮುನ್ನಡೆಸಲು ಶೃಂಗಸಭೆಗಳಲ್ಲಿ ಪರಸ್ಪರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಫ್ರಾನ್ಸ್ ನೊಂದಿಗೆ ಸೋದರಿ ಶೃಂಗಸಭೆಯ ಪಾಲುದಾರಿಕೆಯ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
2023-2024ನೇ ಸಾಲಿನ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳ ಅಡಿಯಲ್ಲಿ ಹಲವಾರು ಕಂಪನಿಗಳಿಗೆ ನೀಡಲಾಯಿತು. ಇನ್ಫೋಸಿಸ್ ಸಂಸ್ಥೆಗೆ ಕರ್ನಾಟಕದ ಪ್ರತಿಷ್ಠಿತ ಐಟಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ, ಐಟಿ, ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯ ನಿರ್ದೇಶಕ ದರ್ಶನ್ ಎಚ್.ವಿ. ಉಪಸ್ಥಿತರಿದ್ದರು.
ಮುಂದಿನ ವರ್ಷದಿಂದ ಸ್ಟಾರ್ಟ್ ಅಪ್ ಪ್ರಶಸ್ತಿ: ‘ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆ ವತಿಯಿಂದ ಅಭೂತಪೂರ್ವ ಸಾಧನೆಗೈದ ಸ್ಟಾರ್ಟ್ ಅಪ್‍ಗಳನ್ನು ಗುರುತಿಸಿ ಮುಂದಿನ ವರ್ಷದಿಂದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ‘ಅಖಿಲ ಭಾರತ ಸ್ಟಾರ್ಟ್ ಅಪ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು. ಪರಿಣಿತ ತಜ್ಞರು, ವಾಣೀಜ್ಯೋದ್ಯಮಿಗಳು, ಹೂಡಿಕೆದಾರರು, ಪ್ರಖ್ಯಾತ ಭಾಷಣಕಾರರನ್ನೊಳಗೊಂಡ ತೀರ್ಪುಗಾರರ ಸಮಿತಿಯನ್ನು ರಚಿಸಿ ಅತ್ಯುತ್ತಮವಾದ ಸ್ಟಾರ್ಟ್ ಅಪ್‍ಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು’
-ಪ್ರಿಯಾಂಕ್ ಖರ್ಗೆ. ಐಟಿ, ಬಿಟಿ ಸಚಿವ