ಬೆಂಗಳೂರು ಟೆಕ್ ಶೃಂಗಸಭೆ | ಜಾಗತಿಕ ಸಾಮರ್ಥ್ಯ ಕೇಂದ್ರಗಳ ಬಲವರ್ಧನೆಗೆ ಆದ್ಯತೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಜಾಗತಿಕ ಸಾಮಥ್ರ್ಯ ಕೇಂದ್ರ(ಜಿಸಿಸಿ)ಗಳ ಬಲವರ್ಧನೆಗೆ ಕರ್ನಾಟಕ ಪ್ರಧಾನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ಟೆಕ್ ಶೃಂಗಸಭೆಯ ಅಂಗವಾಗಿ ಆಯೋಜಿಸಿದ್ದ ‘ಬೆಂಗಳೂರು: ವಿಶ್ವದ ಜಿಸಿಸಿ ಪ್ರಧಾನ ಕೇಂದ್ರ’ ಶೀರ್ಷಿಕೆಯ ಜಿಸಿಸಿ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಈ ಶೃಂಗಸಭೆಯು ತಂತ್ರಜ್ಞಾನ ಮತ್ತು ಆವಿಷ್ಕಾರ ವಲಯದಲ್ಲಿ ಕರ್ನಾಟಕ ಜಾಗತಿಕ ನಾಯಕ ಎಂಬುದನ್ನು ಸಾಕ್ಷೀಕರಿಸುತ್ತಿದೆ. ಜಿಸಿಸಿ ನೀತಿ ಮತ್ತು ಈ ದುಂಡುಮೇಜಿನ ವೇದಿಕೆಗಳ ಮೂಲಕ, ಜಿಸಿಸಿಗಳು ಅಭಿವೃದ್ಧಿ ಹೊಂದಲು ಮತ್ತು ಆವಿಷ್ಕರಿಸಲು ಕರ್ನಾಟಕವು ಅತ್ಯುತ್ತಮ ತಾಣ ಎಂಬುದನ್ನು ಖಚಿತಪಡಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಆವಿಷ್ಕಾರದಲ್ಲಿನ ಸವಾಲುಗಳನ್ನು ಎದುರಿಸಲು ಸರಕಾರವು ಉದ್ಯಮದಾರರಿಗೆ ನೆರವಾಗಲಿದೆ. ಟೆಕ್ ಸ್ಟಾರ್ಟ್ಅಪ್ಗಳ ಅಭಿವೃದ್ಧಿ ನಮ್ಮ ಗುರಿಯಾಗಿರುವುದರಿಂದ ಎಲ್ಲ ರೀತಿಯಲ್ಲೂ ಬೆಂಬಲ ಕೊಡುವಲ್ಲಿ ಸಕ್ರಿಯವಾಗಿದ್ದೇವೆ ಎಂದು ಉದ್ಯಮದಾರರಿಗೆ ಭರವಸೆ ನೀಡಿದ ಅವರು, ಜೊತೆಗೆ 100 ಕಾರ್ಪೊರೇಟ್ ಸಂಸ್ಥೆಗಳು, 100 ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆದು ಕೌಶಲ್ಯ ಹಾಗೂ ತಾಂತ್ರಿಕ ಶಿಕ್ಷಣ ಅಳವಡಿಸಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸಾಥ್ ನೀಡಬೇಕು ಎಂದು ಸಲಹೆ ನೀಡಿದರು.
ಜಿಸಿಸಿ ದುಂಡು ಮೇಜಿನ ಸಭೆಯಲ್ಲಿ ನ್ಯಾಸ್ಕಾಮ್ನ ಪ್ರಾದೇಶಿಕ ನಿರ್ದೇಶಕ ಭಾಸ್ಕರ್ ವರ್ಮಾ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದರು. ಸಭೆಯಲ್ಲಿ ಫಿಲಿಪ್ಸ್, ಜೆಪಿ ಮೋರ್ಗಾನ್, ನೋಕಿಯಾ ನಂತಹ ಪ್ರತಿಷ್ಠಿತ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಜಿಸಿಸಿ ಸಭೆಯ ಮುಖ್ಯಾಂಶಗಳು :
ಪ್ರತಿಭೆ, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಜಿಸಿಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಜಿಸಿಸಿ ಪ್ರತಿನಿಧಿಗಳು ತಮ್ಮ ಸಂಸ್ಥೆಯ ಯಶೋಗಾಥೆ ಹಂಚಿಕೊಳ್ಳಲು ಈ ಸಭೆ ವೇದಿಕೆಯಾಯಿತು. ಜಿಸಿಸಿ ನೀತಿ ಮೂಲಕ ಉದ್ಯಮದಾರರ ನಿರೀಕ್ಷೆಗಳು, ಅದಕ್ಕೆ ಅಗತ್ಯವಿರುವ ನೆರವು ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.